ಕಾಪು: ಜಮಾಅತೆ ಇಸ್ಲಾಮಿ ಹಿಂದ್ ಕಾಪು ವರ್ತುಲದ ವತಿಯಿಂದ *ಹೋಟೆಲ್ ಮಂದಾರ* ದಲ್ಲಿ ಮಾಧ್ಯಮ ಮಿತ್ರರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ 'ಇಸ್ಲಾಮ್ ಮತ್ತು ಮುಸ್ಲಿಮರನ್ನು ಅರಿಯಿರಿ' ಎಂಬ ವಿಚಾರದಲ್ಲಿ ವಿಷಯ ಮಂಡನೆ ಮಾಡಿದ ಜಮಾ ಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞ ಮಾತನಾಡಿ,"ಧರ್ಮಗಳೆಂದರೆ ಜಗತ್ತಿನಲ್ಲಿ ಬೆಳಕು ಎಂದು ಹೇಳಲಾಗುತ್ತದೆ. ಇಸ್ಲಾಮ್ ವ್ಯಕ್ತಿಯೊಂದಿಗೆ ಜೋಡಿಸಲ್ಪಟ್ಟ ಧರ್ಮವಲ್ಲ. ಅದು ಸೈದ್ದಾಂತಿಕ ಹಿನ್ನಲೆಯುಳ್ಳ ಧರ್ಮವಾಗಿದೆ. ಇಸ್ಲಾಮಿನ ಆಶಯ ದೇವನ ಆದೇಶಗಳನ್ನು ಪಾಲಿಸಿ ಬದುಕುವುದಾಗಿದೆ. ಇಸ್ಲಾಮಿನ ಮೂಲಭೂತ ವಿಶ್ವಾಸ ಏಕ ದೇವತ್ವ ಆಗಿದೆ.
ಒಂದೇ ದೇವನ ಸೃಷ್ಟಿಯಾದ ನಮ್ಮ ಸಂಬಂಧ ಸಹೋದರತ್ವದ ಸಂಬಂಧವಾಗಿದೆ. ಏಕದೇವತ್ವದ ಸಿದ್ಧಾಂತ ವಿಶಾಲ ಸಿದ್ದಾಂತವಾಗಿದೆ. ಬದುಕು ಎಂಬುವುದು ದೊಡ್ಡ ಹೊಣೆಗಾರಿಕೆ ಎಂದು ಇಸ್ಲಾಂ ಕಲಿಸುತ್ತದೆ. ಈ ಬದುಕಿನಲ್ಲಿ ನಾವು ಮಾಡುವ ಒಳಿತು, ಕೆಡುಕಿಗೆ ನಾವು ಜವಾಬ್ದಾರರು ಎಂದು ಇಸ್ಲಾಂ ಕಲಿಸುತ್ತದೆ. ಮರಣದ ನಂತರ ಒಂದು ಬದುಕಿದೆ ಎಂದು ಕುರಾನ್ ನಮಗೆ ಮಾರ್ಗದರ್ಶನ ಮಾಡುತ್ತದೆ ಎಂದು ಹೇಳಿದರು.
ನಂತರ ಮಾಧ್ಯಮ ಮಿತ್ರರೊಂದಿಗೆ ಇಸ್ಲಾಮ್ ಧರ್ಮದ ಕುರಿತಾದ ಸಂವಾದ ಕಾರ್ಯ ನಡೆಯಿತು. ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಖ್ಯಾತ ಪತ್ರಕರ್ತ ಎ.ಕೆ ಕುಕ್ಕಿಲ ಭಾಗವಹಿಸಿದರು. ಪತ್ರಕರ್ತರಿಂದ ಪ್ರಸಕ್ತ ಸನ್ನಿವೇಶದ ಕುರಿತಾಗಿ ಬಂದ ಹಲವು ಪ್ರಶ್ನೆಗಳಿಗೆ ಮುಹಮ್ಮದ್ ಕುಂಞ ಮತ್ತು ಏ. ಕೆ. ಕುಕ್ಕಿಲ ರವರು ಉತ್ತರಿಸಿದರು.
ಕಾರ್ಯಕ್ರಮದಲ್ಲಿ ಮುಹಮ್ಮದ್ ಇಕ್ಬಾಲ್ ಕಾಪು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅನ್ವರ್ ಅಲಿ ಕಾಪು ಅಧ್ಯಕ್ಷೀಯ ಭಾಷಣ ಮಾಡಿದರು. ವೇದಿಕೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಕಾಪು ತಾಲೂಕು ಅಧ್ಯಕ್ಷ ಸುರೇಶ್ ಎರ್ಮಾಲ್, ಉದ್ಯಮಿ ಮುಸ್ತಾಕ್ ಇಬ್ರಾಹಿಂ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ,ಗರಿಷ್ಠ ಸಂಖ್ಯೆಯಲ್ಲಿ ಮಾಧ್ಯಮ ಮಿತ್ರರು ಮತ್ತು ಹಿತೈಷಿಗಳು ಭಾಗವಹಿಸಿದ್ದರು. ಕಾರ್ಯಕ್ರಮವು ಮೌಲಾನಾ ಜಫ್ರುಲ್ಲ ಖಾನ್ ರವರ ಕುರ್ ಆನ್ ಪಠಣದೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮವನ್ನು ಮುಹಮ್ಮದ್ ಶಾರುಖ್ ತೀರ್ಥಹಳ್ಳಿ ನಿರೂಪಿಸಿ ಧನ್ಯವಾದ ನೀಡಿದರು.
Kshetra Samachara
07/07/2022 12:35 pm