ಕಾರ್ಕಳ: ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಗ್ರಾಮೀಣ ಪ್ರದೇಶ ಮುನಿಯಾಲಿನ ಪ್ರಕೃತಿ ಸೊಬಗಿನ ನಡುವಿನ ವಿಶಾಲ ಪ್ರದೇಶದಲ್ಲಿ ದೇಶಿಯ ಗೀರ್ ತಳಿ ಗೋಧಾಮ ಸಂಜೀವಿನಿ ಫಾರ್ಮ್ ಮತ್ತು ಡೈರಿ ಲೋಕಾರ್ಪಣೆಗೆ ಸಿದ್ಧಗೊಂಡಿದೆ.
ಪುರಾತನ ಶೈಲಿಯಾದರೂ ಆಧುನಿಕ ಸ್ಪರ್ಶದಲ್ಲಿ ಕಾನನದ ಮಧ್ಯೆ ಡೈರಿ ನಿರ್ಮಾಣಗೊಂಡಿದ್ದು, ಗೀರ್ ಗೋವು ಮತ್ತು ದೇಶೀಯ ವಿವಿಧ ಜಾತಿಯ ಗೋವುಗಳು ಡೈರಿಯಲ್ಲಿ ಸ್ವಚ್ಛಂದವಾಗಿ ವಿಹರಿಸುವ ದೃಶ್ಯ ಮನಮೋಹಕ.
ಕೈಗಾರಿಕೋದ್ಯಮಿ ಮೂಡುಬಿದಿರೆಯ ಎಸ್.ಕೆ.ಎಫ್. ಉದ್ಯಮ ಸಮೂಹ ಸಂಸ್ಥೆಗಳ ಸ್ಥಾಪಕರು ಮತ್ತು ಅಧ್ಯಕ್ಷರಾಗಿರುವ ಜಿ.ರಾಮಕೃಷ್ಣ ಆಚಾರ್ ಅವರ ಗೋ ಪ್ರೀತಿ ಮತ್ತು ಕೃಷಿ ಒಲವಿನಿಂದಾಗಿ ಸಂಜೀವಿನಿ ಫಾರ್ಮ್ ಮತ್ತು ಡೈರಿ ಭವ್ಯವಾಗಿ ತಲೆಎತ್ತಿದೆ.
ಸಿ.ಎ. ಆಗಿರುವ ರಾಮಕೃಷ್ಣ ಆಚಾರ್ ಅವರ ಪತ್ನಿ ಸವಿತಾ ಆರ್. ಆಚಾರ್ ಕೂಡ ಗೋ ಪ್ರೇಮಿಯಾಗಿದ್ದು, ಗೋವುಗಳೊಂದಿಗೆ ಬೆರೆತು ಡೈರಿ ಮುನ್ನಡೆಸುತ್ತಿದ್ದಾರೆ. "ಯಾವುದೇ ಲಾಭದ ಉದ್ದೇಶದಿಂದ ಡೈರಿ ನಡೆಸುತ್ತಿಲ್ಲ. ಗೋ ಸೇವೆಯೇ ನನ್ನ ಮೊದಲ ಆದ್ಯತೆ. ಜೊತೆಗೆ ಹಳ್ಳಿಯ ಫಾರ್ಮನ್ನು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿ, ಯುವ ಜನತೆ ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶವಿದೆ. ಯುವ ಸಮುದಾಯ ಮುಂದೆ ಕೃಷಿ ಜೊತೆಗೆ ದೇಶೀಯ ಹೈನುಗಾರಿಕೆಯಲ್ಲಿ ತೊಡಗುವಂತೆ ಪ್ರೇರೇಪಿಸಲು ನಮ್ಮ ಫಾರ್ಮನ್ನು ರೂಪಿಸಲಾಗಿದೆ ಎಂದು ಫಾರ್ಮ್ ಸ್ಥಾಪಕ ಜಿ. ರಾಮಕೃಷ್ಣ ಆಚಾರ್ ಅಭಿಮಾನದಿಂದ ಹೇಳಿದರು.
Kshetra Samachara
26/12/2020 08:42 pm