ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಜೋಡಿಸಲು ಸಾಧ್ಯವಿಲ್ಲ; ಕೇಂದ್ರ ಸಚಿವ ನಾರಾಯಣ ಸ್ವಾಮಿ ಕುಟುಕು

ಕೊರಟಗೆರೆ: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆ ಕಾರ್ಯಕ್ರಮವು ಅವರ ಪಕ್ಷದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರನ್ನು ಜೋಡಿಸಲು ಸಾಧ್ಯವಿಲ್ಲ. ಇನ್ನು ದೇಶವನ್ನು ಜೋಡಿಸಲು ಸಾಧ್ಯವೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಕುಟುಕಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಮುಖಂಡ ಡಾ. ಲಕ್ಷೀಕಾಂತ್ ಹಮ್ಮಿಕೊಂಡಿದ್ದ ವಾಲಿಬಾಲ್ ಪಂದ್ಯವಾಳಿ ಕಾರ್ಯಕ್ರಮದ ಉದ್ಘಾಟಸಿ ಮಾತನಾಡಿದರು.

ಭಾರತ್ ಜೋಡೋ ಕಾರ್ಯಕ್ರಮ ರಾಹುಲ್ ಗಾಂಧಿ ಅವರು ಯಾವ ಕಾರಣಕ್ಕಾಗಿ ಮಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ಕರ್ನಾಟಕದಲ್ಲೇ ಕಾಂಗ್ರೆಸ್ ಪಕ್ಷನ್ನು ಜೋಡಿಸಲಾಗದ ಸ್ಥಿತಿ ಇದ್ದು ದೇಶ ಜೋಡಿಸಲು ಹೋಗುವುದು ಸಾಧ್ಯನಾ? ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆಳಿಗ್ಗೆ ಎದ್ದಾಗ ಅವರು ಮೊದಲು ಜಪ ಮಾಡುವುದು ಆರ್.ಎಸ್.ಎಸ್ ಸಂಘಟನೆ ಬಗ್ಗೆಯೇ, ಈ ಸಂಘಟನೆಯನ್ನು ಕಾಂಗ್ರೆಸ್ ತಮ್ಮ ಅಧಿಕಾರ ಅವಧಿಗಳಲ್ಲಿ ದುರುದ್ದೇಶ ಪೂರ್ವಕವಾಗಿ ಯಾವುದೇ ತನಿಖೆ ಮಾಡದೆ, ಕಾರಣವಿಲ್ಲದೇ ನಿಷೇದ ಮಾಡಿದ್ದರು. ಆರ್.ಎಸ್.ಎಸ್ ಎಂದಿಗೂ ದೇಶ ದೋಹ ಕೆಲಸ ಮಾಡಿಲ್ಲ ಸಿದ್ದರಾಮಯ್ಯ ಯಾರನ್ನೋ ಮೆಚ್ಚಿಸಲು ಆ ಸಂಘಟನೆ ಯನ್ನು ನಿಷೇಧಿಸಲು ಒತ್ತಾಯಿ ಸುತ್ತಿದ್ದಾರೆ ಎಂದರು.

ದೇಶದಲ್ಲಿ ನಿಜವಾದ ದಲಿತ ಮತ್ತು ಸಂವಿಧಾನ ವಿರೋಧಿಗಳು ಕಾಂಗ್ರೆಸ್ ಪಕ್ಷವರು. ಆದರೆ ಅದನ್ನು ಬಿಜೆಪಿ ಮೇಲೆ ಹಾಕಲು ಬಹಳ ಶ್ರಮ ಪಡುತ್ತಿದ್ದಾರೆ. ದೇಶದಲ್ಲಿ, ರಾಜ್ಯದಲ್ಲಿ ಅತಿ ಹೆಚ್ಚು ಎಂಪಿ, ಎ.ಎಲ್.ಎ. ಸಚಿವರು ಇರುವುದು ಬಿಜೆಪಿಯಲ್ಲಿ, ರಾಜ್ಯದಲ್ಲಿ ದಲಿತ ನಾಯಕ ಗೋವಿಂದ ಕಾರಜೋಳ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದೇವೆ. ಸಂವಿದಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ದುಃಖ ನೀಡಿದ್ದು, ಅವಮಾನಿಸಿದ್ದು, ಸಂವಿಧಾನ ಬದಲಾವಣೆ ಮಾಡಿದ್ದು ಕಾಂಗ್ರೆಸ್ ಪಕ್ಷ ಎನ್ನುವುದು ದಲಿತರು ಮರೆತಿಲ್ಲ ಎಂದರು.

ನಾನು ಸಚಿವನಾದ ಮೇಲೆ ನನ್ನ ಇಲಾಖೆಯಿಂದ ನ್ಯಾಷನಲ್ ಎಸ್.ಸಿ/ ಎಸ್.ಟಿ ಕಾರ್ಪೊರೇಷನ್‌ನಿಂದ ರಾಜ್ಯಗಳ ಅಭಿವೃದಿಗೆ ಅತಿ ಕಡಿಮೆ ಬಡ್ಡಿ ಸಾಲ ಕೊಡಲಾಗುತ್ತಿದೆ. ಅಂಬೇಡ್ಕರ್ ಮತ್ತು ಬಾಬು ಜಗಜೇವನ್ ರಾಂ ಭವನ ನಿರ್ಮಾಣ, ದೇಶದಲ್ಲಿ ಪ್ರತಿ ವರ್ಷ ಮೂರು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಯು.ಪಿ.ಎಸ್.ಸಿ. ತರಬೇತಿ ನೀಡಲಾಗುತ್ತಿದೆ ಎಂದರು. ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷದಲ್ಲಿ ಆಕಾಂಕ್ಷಿ ಗಳು ಹೆಚ್ಚಾಗಿದ್ದು ಪಕ್ಷ ನಾಯಕರು ಮುಖಂಡರು ಅದನ್ನು ಸರಿತೂಗಿಸುವರು ಮತ್ತೆ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು.

ಈ ಸಂದರ್ಭದಲ್ಲಿ ಕೊರಟಗೆರೆ ವಿಧಾನಸಭಾ ಆಕಾಂಕ್ಷಿ ಡಾ.ಲಕ್ಷೀಕಾಂತ್, ಮಧುಗಿರಿ ಜಿಲ್ಲಾದ್ಯಕ್ಷ ಬಿ.ಕೆ.ಮಂಜುನಾಥ್, ತಾಲೂಕು ಅದ್ಯಕ್ಷ ಪವನ್‍ ಕುಮಾರ್, ಮಧುಗಿರಿ ತಾಲೂಕು ಅದ್ಯಕ್ಷ ನರಸಿಂಹ ಮೂರ್ತಿ, ಮುಖಂಡರುಗಳಾದ ತಿಮ್ಮಜ್ಜ, ವಿಜಯ್‍ಕುಮಾರ್, ಸುಶೀಲಮ್ಮ, ಮಮತ, ಗುರುದತ್, ದೇವರಾಜು, ಅರುಣ್ ಕುಮಾರ್, ಸ್ವಾಮಿ, ಭಾನುಪ್ರಕಾಶ್, ಸೇರಿದಂತೆ ಇತರರು ಇದ್ದರು.

Edited By : Vijay Kumar
Kshetra Samachara

Kshetra Samachara

03/10/2022 07:12 pm

Cinque Terre

3.34 K

Cinque Terre

0