ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 15 ರನ್‌ಗಳ ಸೋಲು ಅನುಭವಿಸಿತು. ಪಂದ್ಯದ ಅಂತಿಮ ಘಟ್ಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಫೀಲ್ಡ್ ಅಂಪೈರ್‌ಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜಸ್ಥಾನ್ ನೀಡಿದ್ದ 223 ರನ್ ಬೃಹತ್ ಮೊತ್ತದ ಗುರಿ ಹಿಂಬಾಲಿಸಿದ ಡೆಲ್ಲಿ ತಂಡಕ್ಕೆ ಕೊನೆಯ ಓವರ್‌ನಲ್ಲಿ 36 ರನ್ ಅಗತ್ಯವಿತ್ತು. ಅದರಂತೆ ರೋವ್ಮನ್ ಪೊವೆಲ್ ಅವರು ಮೊದಲ ಎರಡು ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದರು. ನಂತರ ಮೂರನೇ ಎಸೆತವನ್ನು ಒಬೆಡ್ ಮೆಕಾಯ್ ಅವರು ಫುಲ್ ಟಾಸ್ ಹಾಕಿದರು. ಈ ಎಸೆತದಲ್ಲಿಯೂ ರೋವ್ಮನ್ ಪೊವೆಲ್ ಸಿಕ್ಸರ್ ಬಾರಿಸಿದರು. ಆದರೆ ಚೆಂಡು ಸೊಂಟದ ಮೇಲಿದ್ದ ಕಾರಣ ಅದು ನೋ ಬಾಲ್ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟೀಮ್ ಮ್ಯಾನೇಜ್‌ಮೆಂಟ್ ವಾದಕ್ಕಿಳಿಯಿತು.
ಈ ವೇಳೆ ನೋ ಬಾಲ್ ನೀಡಲು ಫೀಲ್ಡ್ ಅಂಪೈರ್‌ಗಳು ನಿರಾಕರಿಸಿದರು ಹಾಗೂ ಮೂರನೇ ಅಂಪೈರ್ ಸಲಹೆ ಪಡೆಯಲು ಕೂಡ ಮುಂದಾಗಲಿಲ್ಲ. ಈ ವೇಳೆ ಬ್ಯಾಟ್ ಮಾಡುತ್ತಿದ್ದ ರೋವ್ಮನ್ ಪೊವೆಲ್ ಹಾಗೂ ಕುಲದೀಪ್ ಯಾದವ್ ಅವರನ್ನು ಮೈದಾನದಿಂದ ಹೊರಗಡೆ ಬರುವಂತೆ ನಾಯಕ ರಿಷಭ್ ಪಂತ್ ಸೂಚನೆ ನೀಡಿದರು. ನಂತರ ಪಂದ್ಯ ಮುಂದುವರಿಯಿತು. ಆದರೆ ಕೊನೆಯ 3 ಎಸೆತಗಳಲ್ಲಿ ಡೆಲ್ಲಿ ಗಳಿಸಲಾಗಿದ್ದು ಕೇವಲ ಎರಡು ರನ್ ಮಾತ್ರ. ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ 15 ರನ್‌ಗಳ ರೋಚಕ ಜಯ ತನ್ನದಾಗಿಸಿಕೊಂಡಿತು.
ಸೋಲಿನ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್, "ಆ ಎಸೆತಕ್ಕೆ ನೋ ಬಾಲ್ ತೀರ್ಪು ಕೊಟ್ಟಿದ್ದರೆ, ನಮ್ಮ ಪಾಲಿಗೆ ಅತ್ಯಮೂಲ್ಯವಾಗಿರುತ್ತಿತ್ತು. ಅದನ್ನು ನಾವು ಕೂಡ ಪರಿಶೀಲನೆ ಮಾಡಬಹುದಿತ್ತು. ಆದರೆ ಇದು ನಮ್ಮ ನಿಯಂತ್ರಣದಲ್ಲಿಲ್ಲ. ಇದರಿಂದ ಎಲ್ಲರಿಗೂ ತುಂಬಾ ಜಿಗುಪ್ಸೆಯಾಗಿದೆ. ಏಕೆಂದರೆ, ಅದು ಕನಿಷ್ಠ ಕ್ಲೋಸ್ ಆಗಿಯೂ ಇರಲಿಲ್ಲ. ಸೊಂಟದ ಮೇಲೆ ಚೆಂಡು ಇರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಮೈದಾನದಲ್ಲಿದ್ದ ಪ್ರತಿಯೊಬ್ಬರು ಅದನ್ನು ವೀಕ್ಷಿಸಿದ್ದಾರೆ," ಎಂದು ಬೇಸರ ವ್ಯಕ್ತಪಡಿಸಿದರು.
PublicNext
23/04/2022 04:26 pm