ಬೆಂಗಳೂರು: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಸ್ಪಿನ್ ಆಲ್‌ರೌಂಡರ್ ಅಕ್ಷರ್ ಪಟೇಲ್ ಭಾರತ ತಂಡಕ್ಕೆ ಮರಳಿದ್ದು, ಲೆಗ್ ಸ್ಪಿನ್ನರ್ ಕುಲ್‌ದೀಪ್ ಯಾದವ್ ಅವರನ್ನು ತಂಡದಿಂದ ಬಿಡುಗಡೆಗೊಳಿಸಲಾಗಿದೆ.
ಬಿಸಿಸಿಐನ ವೈದ್ಯಕೀಯ ತಂಡದಿಂದ ಅನುಮತಿ ಪಡೆದ ನಂತರ ಆಲ್ ರೌಂಡರ್ ಅಕ್ಷರ್ ಪಟೇಲ್ ಅವರನ್ನು ಭಾರತ ತಂಡಕ್ಕೆ ಸೇರಿಸಲಾಗಿದೆ. ನ್ಯೂಜಿಲೆಂಡ್ ವಿರುದ್ಧ ತವರು ಟೆಸ್ಟ್ ಸರಣಿಯ ಬಳಿಕ ಇದೇ ಮೊದಲ ಬಾರಿ ಭಾರತ ಟೆಸ್ಟ್ ತಂಡದಲ್ಲಿ ಅಕ್ಷರ್ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ. ಗಾಯದಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಬಿದ್ದಿದ್ದ 28ರ ಪ್ರಾಯದ ಅಕ್ಷರ್ ಪಟೇಲ್, ನಂತರ ಎರಡನೇ ಬಾರಿ ಕೊರೊನಾ ಸೋಂಕು ತಗುಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ವಿರುದ್ಧ ಸೀಮಿತ ಓವರ್‌ಗಳ ಸರಣಿಗೆ ಅಲಭ್ಯರಾಗಿದ್ದರು.
ಇದೀಗ ಸಂಪೂರ್ಣ ಫಿಟ್‌ನೆಸ್‌ಗೆ ಮರಳಿರುವ ಅಕ್ಷರ್ ಪಟೇಲ್ ಮೊಹಾಲಿಯಲ್ಲಿ ಭಾರತ ಟೆಸ್ಟ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯ ಬೆಂಗಳೂರಿನಲ್ಲಿ ಮಾರ್ಚ್ 12ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಬುಧವಾರ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ.
PublicNext
08/03/2022 05:04 pm