ಬೆಂಗಳೂರು: ಮೊದಲ ದಿನದ ಹರಾಜಿನ ಬಳಿಕ ಗರಿಷ್ಠ ಹಣವನ್ನು ಹೊಂದಿದ್ದ ತಂಡ ಎನಿಸಿಕೊಂಡಿದ್ದ ಪಂಜಾಬ್ ಕಿಂಗ್ಸ್ 2ನೇ ದಿನದ ಹರಾಜು ಪ್ರಕ್ರಿಯೆ ಆರಂಭವಾದ ಬೆನ್ನಲ್ಲಿಯೇ ದೊಡ್ಡ ಮೊತ್ತದ ಖರೀದಿಗಳನ್ನು ಮಾಡಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೆಗಾ ಹರಾಜಿನ ಎರಡನೇ ದಿನವಾದ ಇಂದು ಇಂಗ್ಲೆಂಡ್ ಮೂಲದ ಕ್ರಿಕೆಟಿಗ ಲಿಯಾಮ್ ಲಿವಿಂಗ್‌ಸ್ಟೋನ್ ಬರೋಬ್ಬರಿ 11.50 ಕೋಟಿಗೆ ಬಿಕರಿಯಾಗಿದ್ದಾರೆ.
ಲಿಯಾಮ್ ಲಿವಿಂಗ್‌ಸ್ಟೋನ್ ಐಪಿಎಲ್ 2022ರ ಹರಾಜಿನ ಈವರೆಗಿನ 4ನೇ ಅತ್ಯಂತ ದುಬಾರಿ ಆಟಗಾರ. ಅಷ್ಟೇ ಅಲ್ಲದೆ ವಿದೇಶದ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಸ್ಫೋಟಕ ಬ್ಯಾಟರ್ ಆಗಿ ಗುರುತಿಸಿಕೊಂಡಿರುವ ಲಿಯಾಮ್ ಲಿವಿಂಗ್‌ಸ್ಟೋನ್ ಬಲಗೈ ಲೆಗ್ ಬ್ರೇಕ್ ಬೌಲರ್ ಕೂಡ ಹೌದು.
ಕಳೆದೆರಡು ಐಪಿಎಲ್ ಆವೃತ್ತಿಗಳಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದ ಲಿಯಾಮ್ ಲಿವಿಂಗ್‌ಸ್ಟೋನ್ ಒಟ್ಟು 9 ಪಂದ್ಯಗಳನ್ನಾಡಿ 113 ರನ್ ಕಲೆಹಾಕಿದ್ದಾರೆ ಹಾಗೂ ಈ ಪಂದ್ಯಗಳ ಪೈಕಿ 1 ಓವರ್ ಬೌಲಿಂಗ್ ಮಾಡಿರುವ ಅವರು ಯಾವುದೇ ವಿಕೆಟ್ ಪಡೆಯದೇ 13 ರನ್ ನೀಡಿದ್ದಾರೆ. ಹೀಗೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಹೇಳಿಕೊಳ್ಳುವಂತಹ ಉತ್ತಮ ಅಂಕಿಅಂಶವನ್ನು ಹೊಂದಿಲ್ಲದೇ ಇರುವ ಲಿಯಾಮ್ ಲಿವಿಂಗ್‌ಸ್ಟನ್ ಮೇಲೆ ಇಷ್ಟು ದೊಡ್ಡ ಮೊತ್ತದ ಹರಾಜು ನೆಡೆದದ್ದು ಕ್ರಿಕೆಟ್ ಅಭಿಮಾನಿಗಳ ಹುಬ್ಬೇರುವಂತೆ ಮಾಡಿದೆ.
PublicNext
13/02/2022 02:40 pm