ಕೇಪ್‌ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಕ್ಕೆ ಟೀಂ ಇಂಡಿಯಾ ಆಟಗಾರ ದೀಪಕ್ ಚಹಾರ್ ರೋಚಕ ತಿರುವು ನೀಡಿದ್ದರು. ಆದರೆ ಪಂದ್ಯ ಗೆಲುವಿನ ದಡ ಸೇರಲು ಸಾಧ್ಯವಾಗದೆ ಇದ್ದಾಗ ದೀಪಕ್ ಚಹಾರ್ ಭಾವುಕರಾಗಿ ಕಣ್ಣೀರು ಸಾಕಿದರು. ಈ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 288 ರನ್ ಗುರಿ ಹಿಂಬಾಲಿಸಿದ್ದ ಭಾರತ ತಂಡವು ಬಹುಬೇಗ ಪ್ರಮುಖ ಬ್ಯಾಟರ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇನ್ನೇನು ಸೋಲು ಖಚಿತ ಎನ್ನುವ ಸಮಯದಲ್ಲಿ ಗೆಲುವಿನ ಆಶ್ವಾಸನೆ ಮೂಡಿಸಿದ್ದು ದೀಪಕ್ ಚಹಾರ್ ಸ್ಫೋಟಕ ಬ್ಯಾಟಿಂಗ್.
ದೀಪಕ್ ಚಹಾರ್ ಆಡಿದ ಕೇವಲ 34 ಎಸೆತಗಳಲ್ಲಿ 54 ರನ್ (2 ಸಿಕ್ಸರ್, 5 ಬೌಂಡರಿ) ಚೆಚ್ಚಿದರು. ಆ ಮೂಲಕ ಭಾರತ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿದ್ದರು. ಕೊನೆಯ ಮೂರು ಓವರ್‌ಗಳಲ್ಲಿ ಭಾರತಕ್ಕೆ 10 ರನ್ ಅಗತ್ಯವಿತ್ತು. ಇನ್ನೇನು ಭಾರತ ತಂಡ ಗೆಲ್ಲುವುದು ಬಹುತೇಕ ಖಚಿತ ಎಂದೇ ಎಲ್ಲರೂ ಭಾವಿಸಿದ್ದರು. ಅದರಂತೆ ವಿಶ್ವಾಸದಲ್ಲಿದ್ದ ದೀಪಕ್ ಚಹಾರ್, ಲುಂಗಿ ಎನ್ಗಿಡಿ ಎಸೆತದಲ್ಲಿ ಕವರ್ಸ್ ಮೇಲೆ ಹೊಡೆಯಲು ಪ್ರಯತ್ನಿಸಿ ವಿಕೆಟ್ ಒಪ್ಪಿಸಿದರು.
ಚಹಾರ್ ವಿಕೆಟ್ ಒಪ್ಪಿಸುತ್ತಿದ್ದಂತೆ ಪಂದ್ಯದ ದಿಕ್ಕು ಎದುರಾಳಿ ತಂಡದತ್ತ ಮುಖ ಮಾಡಿತು. ದಕ್ಷಿಣ ಆಫ್ರಿಕಾ ವೇಗಿಗಳ ನಿಧಾನಗತಿಯ ಎಸೆತಗಳನ್ನು ಎದುರಿಸುವಲ್ಲಿ ಜಸ್‌ಪ್ರಿತ್ ಬುಮ್ರಾ, ಯಜುವೇಂದ್ರ ಚಹಲ್ ಹಾಗೂ ಪ್ರಸಿಧ್ ಕೃಷ್ಣ ವಿಫಲರಾದರು. ಅಂತಿಮವಾಗಿ 49.2 ಓವರ್‌ಗಳಿಗೆ ಭಾರತ 283 ರನ್‌ಗಳಿಗೆ ಆಲ್‌ಔಟ್ ಆಯಿತು.
ಭಾರತ ತಂಡವು ಸೋಲು ಅನುಭವಿಸುತ್ತಿದ್ದಂತೆ ದೀಪಕ್ ಚಹಾರ್ ಗಳಗಳನೇ ಕಣ್ಣೀರಿಟ್ಟರು. ಈ ವೇಳೆ ಸಹ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ದೀಪಕ್ ಚಹಾರ್ ಅವರನ್ನು ಸಮಾಧಾನ ಪಡಿಸಿದರು.
PublicNext
24/01/2022 11:32 am