ಕ್ರೈಸ್ಟ್ ಚರ್ಚ್: ನೋ ಬಾಲ್ ಅಲ್ಲ, ವೈಡ್ ಬಾಲ್ ಅಲ್ವೇ ಅಲ್ಲ. ಆದರೂ ಫೀಲ್ಡರ್ ಎಡವಟ್ಟಿನಿಂದ ಒಂದೇ ಎಸೆತದಲ್ಲಿ 7 ರನ್ ಪಡೆದ ಘಟನೆ ನ್ಯೂಜಿಲೆಂಡ್-ಬಾಂಗ್ಲಾದೇಶ ನಡುವಿನ 2ನೇ ಪಂದ್ಯದಲ್ಲಿ ನಡೆದಿದೆ.
ಬಾಂಗ್ಲಾದೇಶ ತಂಡವು ಒಂದೇ ಬಾಲ್‌ನಲ್ಲಿ 7 ರನ್‌ಗಳನ್ನು ನ್ಯೂಜಿಲೆಂಡ್ ತಂಡಕ್ಕೆ ನೀಡಿದೆ. ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ಮಧ್ಯೆ ಎರಡನೇ ಟೆಸ್ಟ್ ಪಂದ್ಯ ಇಂದು ಕ್ರೈಸ್ಟ್ ಚರ್ಚ್‌ನಲ್ಲಿ ಆರಂಭವಾಗಿದೆ. ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಮಾಡಲು ಕ್ರೀಜ್‌ಗೆ ಇಳಿದ ನ್ಯೂಜಿಲೆಂಡ್ 26ನೇ ಓವರ್‌ನಲ್ಲಿ ಒಂದು ಎಸೆತದಲ್ಲಿ 7 ರನ್ ಗಳಿಸಿದೆ. 26ನೇ ಓವರ್ ಅನ್ನು ವೇಗದ ಬೌಲರ್ ಇಬಾದತ್ ಹುಸೇನ್ ಮಾಡುತ್ತಿದ್ದರು. ಇವರ ಓವರ್‌ನ ಕೊನೆಯ ಎಸೆತದಲ್ಲಿ ವಿಲ್ ಯಂಗ್ ಶಾಟ್ ಆಗಿ ಪರಿವರ್ತಿಸಿದರು. ಚೆಂಡು ಎರಡನೇ ಸ್ಲಿಪ್ ನಲ್ಲಿ ಕ್ಯಾಚ್ ಇದ್ದಾಗ ಫೀಲ್ಡರ್ ಕೈಚೆಲ್ಲಿದರು.
ಈ ವೇಳೆ, ಚೆಂಡು ಥರ್ಡ್ ಮ್ಯಾನ್ ನತ್ತ ವೇಗವಾಗಿ ಚಲಿಸಲು ಆರಂಭಿಸಿತು. ಅಷ್ಟರಲ್ಲಿ ವಿಲ್ ಯಂಗ್ ಮತ್ತು ಟಾಮ್ ಲ್ಯಾಥಮ್ ಮೂರು ರನ್ ಪೂರ್ಣಗೊಳಿಸಿದರು. ಚೆಂಡು ಬೌಂಡರಿ ಗೆರೆ ಮುಟ್ಟುವ ಮುನ್ನ ತಸ್ಕಿನ್ ಅಹ್ಮದ್ ಬೌಂಡರಿಗೆ ಅವಕಾಶ ನೀಡದೆ ಚೆಂಡನ್ನು ವಿಕೆಟ್ ಕೀಪರ್‌ಗೆ ಎಸೆದರು. ವಿಕೆಟ್ ಕೀಪರ್ ನೂರುಲ್ ಹಸನ್ ಚೆಂಡನ್ನು ವಿಕೆಟ್‌ಗೆ ಥ್ರೋ ಮಾಡಲು ಹೋಗಿ ಇನ್ನೊಂದು ತುದಿಗೆ ಎಸೆದರು. ಆದರೆ ಚೆಂಡು ಬೌಲರ್ ಮತ್ತು ಫೀಲ್ಡರ್‌ನಿಂದ ತಪ್ಪಿಸಿಕೊಂಡು ಬೌಂಡರಿ ಗೆರೆಗೆ ನುಗ್ಗಿತು. ಇದರೊಂದಿಗೆ ಒಂದೇ ಎಸೆತದಲ್ಲಿ ವಿಲ್ ಯಂಗ್ ಕ್ಯಾಚ್ ಕೈ ತಪ್ಪಿದರೆ, ಓವರ್ ಥ್ರೋ ಕಾರಣದಿಂದಾಗಿ 4 ರನ್ ಕೂಡ ಗಿಫ್ಟ್ ಆಗಿ ಬಂದಿತು. ಹೀಗಾಗಿ ಒಟ್ಟಾರೆ, ನ್ಯೂಜಿಲೆಂಡ್ ಬ್ಯಾಟ್ಸಮನ್ ಗಳು 7 ರನ್ ಗಳನ್ನು ಉಚಿತವಾಗಿ ಕಲೆ ಹಾಕಿದರು. ಈ ರೀತಿಯಾಗಿ ರನ್ ಗಳಿಸಿದ್ದು ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪವಾಗಿದೆ.
PublicNext
09/01/2022 06:15 pm