ದುಬೈ: ಪಾಕಿಸ್ತಾನದ ಬೆನ್ನಲ್ಲೇ ಇಂದು ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಎದುರಿಸಿದೆ. ಪರಿಣಾಮ ಭಾರತವು ಕಿವೀಸ್ ವಿರುದ್ಧ 8 ವಿಕೆಟ್‌ಗಳಿಂದ ಹೀನಾಯ ಸೋಲು ಕಂಡಿದೆ.
ಟಿ20 ವಿಶ್ವಕಪ್ ಟೂರ್ನಿಯ ಭಾಗವಾಗಿ ಇಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 28ನೇ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತವು 7 ವಿಕೆಟ್ ನಷ್ಟಕ್ಕೆ ಕೇವಲ 110 ರನ್ ಗಳಿಸಲು ಶಕ್ತವಾಗಿತ್ತು. ಈ ಸಾಧಾರಣ ಮೊತ್ತದ ಟಾರ್ಗೆಟ್ ಬೆನ್ನತ್ತಿದ ಕಿವೀಸ್ ಪಡೆ 33 ಎಸೆತಗಳು ಬಾಕಿ ಇರುವಂತೆ 2 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿ ಗೆದ್ದು ಬೀಗಿದೆ.
ಕಿವೀಸ್ ಪರ ಡೇರಿಲ್ ಮಿಚೆಲ್ 49 ರನ್, ಕೇನ್ ವಿಲಿಯಮ್ಸನ್ 33 ಹಾಗೂ ಮಾರ್ಟಿನ್ ಗಪ್ಟಿಲ್ 20 ರನ್ ಗಳಿಸಿದರು. ಇನ್ನು ಭಾರತದ ಪರ ಜಸ್ಪ್ರೀತ್ ಬೂಮ್ರಾ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಭಾರತದ ಪರ ರವೀಂದ್ರ ಜಡೇಜಾ ಅಜೇಯ 26 ರನ್ ಹಾಗೂ ಹಾರ್ದಿಕ್ ಪಾಂಡ್ಯ 23 ರನ್ ಗಳಿಸಿದ್ದರು. ಕೆ.ಎಲ್.ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಆಟಗಾರರ ಬ್ಯಾಟಿಂಗ್ ವೈಫಲ್ಯ ತೋರಿದ್ದರು.
PublicNext
31/10/2021 10:34 pm