ದುಬೈ: ಐಸಿಸಿ ವಿಶ್ವಕಪ್ ಟೂರ್ನಿಯ ಮೊದಲ ಹೈವೋಲ್ಟೇಜ್ ಪಂದ್ಯವಾದ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ 10 ವಿಕೆಟ್ ಗಳ ಅಂತರದ ಹೀನಾಯ ಸೋಲುಕಂಡಿದ್ದು, ಆ ಮೂಲಕ ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧದ ತನ್ನ 'ಅಜೇಯ' ಎಂಬ ಹಿರಿಮೆಯನ್ನು ಕಳೆದುಕೊಂಡಿದೆ.
ಇನ್ನು ಭಾರತ ಈ ಸೋಲಿಗೆ ಮೊಹಮ್ಮದ್ ಶಮಿ ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ, ವಿವಾದ ಭುಗಿಲೆದ್ದ ಬೆನ್ನಲ್ಲೇ ಭಾರತದ ಮಾಜಿ ಹಾಗೂ ಸಮಕಾಲೀನ ಕ್ರಿಕೆಟಿಗರು ಶಮಿಗೆ ಬೆಂಬಲಕ್ಕೆ ನಿಂತಿದ್ದಾರೆ.ಸದ್ಯ ಕ್ರಿಕೆಟ್ ನ ಆರಾಧ್ಯ ದೈವ, ಮಾಜಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಶಮಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದಾರೆ.
'ನಾವು ಟೀಮ್ ಇಂಡಿಯಾವನ್ನು ಬೆಂಬಲಿಸುವಾಗ ಭಾರತ ತಂಡದ ಪ್ರತಿಯೊಬ್ಬ ಆಟಗಾರರನ್ನು ಬೆಂಬಲಿಸುತ್ತೇವೆ. ಮೊಹಮ್ಮದ್ ಶಮಿ ಬದ್ಧ ಹಾಗೂ ವಿಶ್ವದರ್ಜೆಯ ಬೌಲರ್. ಇತರೆಲ್ಲ ಕ್ರಿಕೆಟಿಗರಂತೆ ಅವರಿಗೂ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಶಮಿ ಹಾಗೂ ಟೀಮ್ ಇಂಡಿಯಾಗೆ ನಾನು ಬೆಂಬಲ ಸೂಚಿಸುತ್ತೇನೆ' ಎಂದಿದ್ದಾರೆ.
ಇತ್ತ ಮೊಹಮ್ಮದ್ ಶಮಿ ಅವರ ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಶಮಿ ಧರ್ಮವನ್ನು ಎಳೆದು ತಂದಿದ್ದು, 'ದೇಶದ್ರೋಹಿ ಶಮಿ ಪಾಕಿಸ್ತಾನಕ್ಕೆ ತೊಲಗುವಂತೆ' ಕಮೆಂಟ್ ಹಾಕಿದ್ದಾರೆ.ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ನಾವೆಲ್ಲರೂ ನಿಮ್ಮ ಜೊತೆಗಿರುವುದಾಗಿ ಶಮಿಗೆ ಬೆಂಬಲ ಸೂಚಿಸಿದ್ದಾರೆ. ಇಂತಹ ಜನರು ದ್ವೇಷದಿಂದ ಕೂಡಿರುತ್ತಾರೆ. ಯಾಕೆಂದರೆ ಅವರನ್ನು ಯಾರೂ ಪ್ರೀತಿಸುವುದಿಲ್ಲ. ಅವರನ್ನು ಕ್ಷಮಿಸಿ' ಎಂದಿದ್ದಾರೆ.
PublicNext
26/10/2021 10:29 am