ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಜಾಬ್‌ಗೆ ರಾಹುಲ್ ಗುಡ್‌ಬೈ?- ಕನ್ನಡಿಗನಿಗೆ ಮಣೆ ಹಾಕಲು ತುದಿಗಾಲ ಮೇಲೆ ನಿಂತಿವೆ 3 ತಂಡಗಳು

ದುಬೈ: ಕನ್ನಡಿಗ ಕೆ.ಎಲ್‌ ರಾಹುಲ್‌ ಇದೀಗ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ವಿದಾಯ ಹೇಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಗಾಯದ ಸಮಸ್ಯೆ ಕಾರಣ 2017ರ ಐಪಿಎಲ್‌ನಿಂದ ಸಂಪೂರ್ಣವಾಗಿ ಹೊರಗುಳಿದಿದ್ದ ಕೆಎಲ್‌ ರಾಹುಲ್‌, 2018ರ ಹರಾಜಿನಲ್ಲಿ ಬರೋಬ್ಬರಿ 11 ಕೋಟಿ ರೂ.ಗಳ ಭಾರಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್‌ ತಂಡ ಸೇರಿದ್ದರು.

ಕೆ.ಎಲ್.ರಾಹುಲ್ 2018ರ ಆವೃತ್ತಿಯಲ್ಲಿ 659 ರನ್‌, 2019ರಲ್ಲಿ 593 ರನ್, 2020ರಲ್ಲಿ 670 ರನ್‌ ಮತ್ತು ಐಪಿಎಲ್ 2021 ಟೂರ್ನಿಯಲ್ಲಿ 626 ರನ್‌ಗಳ ಮಳೆ ಸುರಿಸಿದ್ದಾರೆ. ಬ್ಯಾಟಿಂಗ್‌ನಲ್ಲಿ ನೀಡಿದ ಭರ್ಜರಿ ಪ್ರದರ್ಶನದ ಫಲವಾಗಿ 2020ರ ಆವೃತ್ತಿಯಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದ ನಾಯಕತ್ವ ಕೂಡ ರಾಹುಲ್‌ಗೆ ಲಭ್ಯವಾಗಿತ್ತು. ಆದರೆ ವರದಿಗಳ ಪ್ರಕಾರ ಪಂಜಾಬ್‌ ತಂಡದಲ್ಲಿನ ತಮ್ಮ 4 ವರ್ಷಗಳ ಅಭಿಯಾನವನ್ನು ರಾಹುಲ್‌ ಅಂತ್ಯಗೊಳಿಸಲಿದ್ದಾರೆ ಎನ್ನಲಾಗಿದೆ.

2008ರಲ್ಲಿ ಆರಂಭವಾದ ಐಪಿಎಲ್‌ ಟೂರ್ನಿಯ ಮೊದಲ ಆವೃತ್ತಿಯಿಂದಲೂ ಪಂಜಾಬ್‌ ಕಿಂಗ್ಸ್‌ ಸ್ಪರ್ಧೆಯಲ್ಲಿ ಇದೆ ಆದರೂ ಈವರೆಗೆ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಗಾಯದ ಮೇಲೆ ಬರೆ ಎಂಬಂತೆ 2014ರ ಬಳಿಕ ತಂಡ ಈವರೆಗೆ ನಾಕ್‌ಔಟ್‌ ಹಂತಕ್ಕೆ ಕಾಲಿಟ್ಟಿಲ್ಲ. ರಾಹುಲ್‌ ಸಾರಥ್ಯದಲ್ಲೂ ಪಂಜಾಬ್‌ ತಂಡ 2020 ಮತ್ತು 2021ರ ಆವೃತ್ತಿಯಲ್ಲಿ ಅಂಕಪಟ್ಟಿಯ 6ನೇ ಸ್ಥಾನ ಪಡೆದಿದೆ.

ಇನ್ನು ಮೆಗಾ ಆಕ್ಷನ್‌ಗೂ ಮುನ್ನ ಫ್ರಾಂಚೈಸಿಗಳು ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬಹುದು ಎಂಬುದನ್ನು ಬಿಸಿಸಿಐ ಇನ್ನು ಖಾತ್ರಿ ಪಡಿಸಿಲ್ಲ. ಕನಿಷ್ಠ 3 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಿದರೆ ಪಂಜಾಬ್ ತಂಡ ಮೊದಲು ರಾಹುಲ್‌ಗೆ ಮಣೆ ಹಾಕಲಿದೆ. ಆದರೆ, ಕರ್ನಾಟಕದ ಸ್ಟಾರ್‌ ಆಟಗಾರನಿಗೆ ಪಂಜಾಬ್‌ ತಂಡದಲ್ಲಿ ಮುಂದುವರಿಯುವ ಆಸಕ್ತಿ ಇಲ್ಲ. ಹೀಗಾಗಿ ಪಂಜಾಬ್‌ ತಂಡ ತನ್ನ ತಾರೆಯನ್ನು ಬಿಡುಗಡೆ ಮಾಡಲೇ ಬೇಕಾಗುತ್ತದೆ ಎಂದು ಕ್ರಿಕ್‌ಬಝ್ ವರದಿ ಮಾಡಿದೆ.

ಇದಕ್ಕೆ ಪುಷ್ಠಿ ಎಂಬಂತೆ, ಐಪಿಎಲ್ 2021 ಟೂರ್ನಿಯ 2ನೇ ಚರಣದಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿದ ಬಳಿಕ ಮಾತನಾಡಿದ್ದ ರಾಹುಲ್‌, ಪಂಜಾಬ್‌ ತಂಡದಲ್ಲಿನ ತಮ್ಮ ಪಾತ್ರವನ್ನು ಆನಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು.

ಭಾರತ ಟಿ20 ತಂಡದ ಭವಿಷ್ಯದ ಉಪನಾಯಕ ಎಂದು ಗುರುತಿಸಿಕೊಂಡಿರುವ ಕೆಎಲ್‌ ರಾಹುಲ್‌, ಅವರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹಲವು ಫ್ರಾಂಚೈಸಿಗಳು ಹಸಿದ ಹೆಬ್ಬುಲಿಗಳಂತೆ ಕಾಯುತ್ತಿವೆ. ಅದರಲ್ಲೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕತ್ವವನ್ನು ವಿರಾಟ್‌ ಕೊಹ್ಲಿ ಬಿಟ್ಟಿರುವ ಹಿನ್ನೆಲೆಯಲ್ಲಿ ಕೆಎಲ್‌ ರಾಹುಲ್‌ ಅವರನ್ನು ಆ ಸ್ಥಾನಕ್ಕೆ ಕರೆತರಲು ಆರ್‌ಸಿಬಿ ಶತಪ್ರಯತ್ನ ನಡೆಸಲಿದೆ. ಸನ್‌ರೈಸರ್ಸ್‌ ಹೈದರಾಬಾದ್ ಕೂಡ ಕಠಿಣ ಪೈಪೋಟಿ ನೀಡಬಲ್ಲದು.

Edited By : Vijay Kumar
PublicNext

PublicNext

12/10/2021 03:39 pm

Cinque Terre

22.85 K

Cinque Terre

3

ಸಂಬಂಧಿತ ಸುದ್ದಿ