ಚೆನ್ನೈ: ತವರು ನೆಲದಲ್ಲಿ ಮೊದಲ ಟೆಸ್ಟ್ ಕ್ರಿಕೆಟ್ ಆಡಿದ ಜಸ್ಪ್ರೀತ್ ಬುಮ್ರಾ ಕನ್ನಡಿಗ ಜಾವಗಲ್ ಶ್ರೀನಾಥ್ ಅವರ ದಾಖಲೆವೊಂದನ್ನಾ ಮುರಿದಿದ್ದಾರೆ.
ಭಾರತದ ವೇಗದ ಬೌಲರ್ ಜಸ್ ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶಿಷ್ಟ ದಾಖಲೆ ಬರೆದರು. ಬುಮ್ರಾ 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ ಟೌನ್ ನಲ್ಲಿ ಟೆಸ್ಟ್ ಗೆ ಪದಾರ್ಪಣೆ ಮಾಡಿದ್ದರು. ಬಳಿಕ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ 17 ಟೆಸ್ಟ್ ಪಂದ್ಯಗಳಿಂದ 79 ವಿಕೆಟ್ ಕಬಳಿಸಿದ್ದಾರೆ. ಇದಕ್ಕೂ ಮೊದಲು ಕನ್ನಡಿಗ ಜಾವಗಲ್ ಶ್ರೀನಾಥ್ 12 ಟೆಸ್ಟ್ ಪಂದ್ಯಗಳ ಬಳಿಕ ತವರಿನಲ್ಲಿ ಆಡಿದ್ದರು. ಇದೀಗ ಮೈಸೂರು ಎಕ್ಸ್ ಪ್ರೆಸ್ ಖ್ಯಾತಿಯ ಜಾವಗಲ್ ಶ್ರೀನಾಥ್ ಹೆಸರಿನಲ್ಲಿದ್ದ ದಾಖಲೆಯನ್ನು ಬುಮ್ರಾ ಹಿಂದಿಕ್ಕಿದರು.
ಜಾವಗಲ್ ಶ್ರೀನಾಥ್ 12 ಟೆಸ್ಟ್ ಪಂದ್ಯಗಳ ತವರಿನಲ್ಲಿ ಆಡಿದರೆ, ಆರ್ಪಿ ಸಿಂಗ್ 11 ಟೆಸ್ಟ್, ದಿಗ್ಗಜ ಸಚಿನ್ ತೆಂಡುಲ್ಕರ್ ಹಾಗೂ ಆಶಿಶ್ ನೆಹ್ರಾ ತಲಾ 10 ಟೆಸ್ಟ್ ಪಂದ್ಯಗಳ ಬಳಿಕ ತವರಿನಲ್ಲಿ ಕಣಕ್ಕಿಳಿದಿದ್ದರು. ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ 3 ವರ್ಷಗಳ ಬಳಿಕ ಬುಮ್ರಾ ತವರಿನಲ್ಲಿ ಕಣಕ್ಕಿಳಿದರು. ವೆಸ್ಟ್ ಇಂಡೀಸ್ ನ ಡರೇನ್ ಗಂಗಾ 17 ಟೆಸ್ಟ್ ಪಂದ್ಯಗಳ ಬಳಿಕ ತವರಿನಲ್ಲಿ ಆಡಿದ್ದರು. ಇದೀಗ ಬುಮ್ರಾ ಕೂಡ ಅವರೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.
PublicNext
06/02/2021 07:52 am