ಶಾರ್ಜಾ: ನಾಯಕ ಡೇವಿಡ್ ವಾರ್ನರ್ ಏಕಾಂಗಿ ಹೋರಾಟದಿಂದಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 34 ರನ್‌ಗಳಿಂದ ಸೋಲು ಕಂಡಿದೆ.
ಶಾರ್ಜಾದಲ್ಲಿ ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಂಡು, ಕ್ವಿಂಟನ್ ಡಿ ಕಾಕ್ ಅವರ ಅರ್ಧಶತಕ ಮತ್ತು ಕೊನೆಯಲ್ಲಿ ಪಾಂಡ್ಯ ಸಹೋದರ ಅಬ್ಬರದಿಂದ 20 ಓವರಿನಲ್ಲಿ 208 ರನ್ ಸೇರಿಸಿದರು. ಇದನ್ನು ಬೆನ್ನಟ್ಟಿದ ಹೈದರಾಬಾದ್ ತಂಡ ನಾಯಕ ವಾರ್ನರ್ ಅವರ ಅರ್ಧಶತಕದ ಹೊರತಾಗಿಯೂ 20 ಓವರಿನಲ್ಲಿ 174 ರನ್ ಸಿಡಿಸಿ 34 ರನ್‌ಗಳ ಅಂತರದಲ್ಲಿ ಸೋಲು ಕಂಡಿದೆ.
ಮುಂಬೈ ವೇಗದ ಬೌಲರ್‌ಗಳು ಆರಂಭದಿಂದಲೇ ಉತ್ತಮವಾಗಿ ಬೌಲ್ ಮಾಡಿದರು. ಟ್ರೆಂಟ್ ಬೌಲ್ಟ್ 4 ಓವರ್‌ಗಳಲ್ಲಿ ಕೇವಲ 28 ರನ್ ನೀಡಿ ಎರಡು ವಿಕೆಟ್ ಕಿತ್ತರು. ಇವರಿಗೆ ಉತ್ತಮ ಸಾಥ್ ಕೊಟ್ಟ ಜೇಮ್ಸ್ ಪ್ಯಾಟಿನ್ಸನ್ 29 ರನ್ ಕೊಟ್ಟು ಎರಡು ವಿಕೆಟ್ ಪಡೆದರು. ನಾಲ್ಕು ಓವರ್ ಬೌಲ್ ಮಾಡಿದ ಜಸ್‍ಪ್ರೀತ್ ಬುಮ್ರಾ ಅವರು ಕೂಡ ಎರಡು ವಿಕೆಟ್ ಪಡೆದು ಮಿಂಚಿದರು.
ಹೈದರಾಬಾದ್ ತಂಡಕ್ಕೆ ಉತ್ತಮವಾದ ಆರಂಭ ದೊರೆಯಿತು. ತಂಡ ನಾಲ್ಕು ಓವರ್ ಮುಕ್ತಾಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 34 ರನ್ ಸೇರಿಸಿತ್ತು. ಆದರೆ 4ನೇ ಓವರಿನ ಮೊದಲ ಬಾಲಿನಲ್ಲೆ ಉತ್ತಮವಾಗಿ ಆಡುತ್ತಿದ್ದ 15 ಬಾಲಿಗೆ 25 ರನ್ ಸಿಡಿಸಿ ಜಾನಿ ಬೈರ್‍ಸ್ಟೋವ್ ಟ್ರೆಂಟ್ ಬೌಲ್ಟ್ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ ಮನೀಶ್ ಪಾಂಡೆ ಮತ್ತು ಡೇವಿಡ್ ವಾರ್ನರ್ ಸೇರಿಕೊಂಡು ಪವರ್ ಪ್ಲೇನ ಕೊನೆಯ ಓವರಿನಲ್ಲಿ 14 ರನ್ ಚಚ್ಚಿ ಆರು ಓವರ್ ಅಂತ್ಯದ ವೇಳೆಗೆ 56 ರನ್ ಸೇರಿಸಿದರು.
PublicNext
04/10/2020 08:00 pm