ಶಾರ್ಜಾ: ಸಂಜು ಸ್ಯಾಮ್ಸನ್ ಹಾಗೂ ನಾಯಕ ಸ್ಟೀವ್ ಸ್ಮಿತ್ ಬಿರುಸಿನ ಆಟದಿಂದ ರಾಜಸ್ಥಾನ್ ರಾಯಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್‌ಗೆ 217 ರನ್‌ಗಳ ಗುರಿ ನೀಡಿದೆ.
ಕೆಲವು ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಇಂದು ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡುತ್ತಿದೆ. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಸಂಜು ಸಾಮ್ಸನ್ 74 ರನ್ (32 ಎಸೆತ, 1 ಬೌಂಡರಿ, 9 ಸಿಕ್ಸರ್) ಹಾಗೂ ನಾಯಕ ಸ್ಟೀವ್ ಸ್ಮಿತ್ 69 ರನ್ ( 47 ಎಸೆತ, 4 ಬೌಂಡರಿ, 4 ಸಿಕ್ಸರ್) ಸಹಾಯದಿಂದ 7 ವಿಕೆಟ್ ನಷ್ಟಕ್ಕೆ 216 ರನ್ ಪೇರಿಸಿತು.
ಸ್ಮಿತ್ ಬಳಗಕ್ಕೆ ಸಿಎಸ್‌ಕೆ ಆರಂಭದಲ್ಲೇ ಆಘಾತ ನೀಡಿತ್ತು. ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ 6 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು. ಈ ವೇಳೆ ಸಂಜು ಸ್ಯಾಮ್ಸನ್ ಹಾಗೂ ನಾಯಕ ಸ್ಟೀವ್ ಸ್ಮಿತ್ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ 2ನೇ ವಿಕೆಟ್ ನಷ್ಟಕ್ಕೆ 121 ರನ್‌ಗಳ ಜೊತೆಯಾಟದ ಕೊಡುಗೆ ನೀಡಿತು.
ಯುವ ಆಟಗಾರ ಸಂಜು ಸ್ಯಾಮ್ಸನ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಸ್ಮಿತ್ ಹಾಗೂ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಆರ್‌ಆರ್ ತಂಡವು 9ನೇ ಓವರ್ ಮುಕ್ತಾಯಕ್ಕೆ 100 ರನ್ ಪೇರಿಸಿತ್ತು. ಆದರೆ 74 ರನ್ ದಾಖಲಿಸಿದ್ದ ಸಂಜು ಸ್ಯಾಮ್ಸನ್ ವಿಕೆಟ್ ಒಪ್ಪಿಸಿದರು. ನಂತರ ಬಂದ ಡೇವಿಡ್ ಮಿಲ್ಲರ್ (0 ರನ್), ರಾಬಿನ್ ಉತ್ತಪ್ಪ (5 ರನ್), ರಾಹುಲ್ ತೇವಾಟಿಯಾ (10 ರನ್), ರಿಯಾನ್ ಪರಾಗ್ (6 ರನ್) ಬಹುಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ಹೆಜ್ಜೆಹಾಕಿದರು. ಕೊನೆಯಲ್ಲಿ ಜೋಫ್ರಾ ಆರ್ಚರ್ ಭರ್ಜರಿ ಬ್ಯಾಟ್ ಬೀಸಿದರು.
PublicNext
22/09/2020 09:27 pm