ದುಬೈ: ಜೋಸ್ ಬಟ್ಲರ್ ಹಾಗೂ ಟಾಮ್ ಕರ್ರನ್ ಹೊರತುಪಡಿಸಿ ಯಾವುದೇ ಆಟಗಾರರು 20 ರನ್ ಗಡಿದಾಟಲಿಲ್ಲ. ಪರಿಣಾಮ ಹ್ಯಾಟ್ರಿಕ್ ಗೆಲುವು ಕೈಚೆಲ್ಲಿಕೊಂಡ ರಾಜಸ್ಥಾನ ರಾಯಲ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 37 ರನ್‌ಗಳಿಂದ ಸೋಲು ಕಂಡಿದೆ.
ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 12ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ರಾಜಸ್ಥಾನ್ ರಾಯಲ್ಸ್ಗೆ 175 ರನ್‌ಗಳ ಗುರಿ ನೀಡಿತ್ತು. ಆದರೆ ನಿಗದಿತ 20 ಓವರ್‌ಗಳಲ್ಲಿ ಆರ್‌ಆರ್ ತಂಡವು 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲು ಮಾತ್ರ ಶಕ್ತವಾಯಿತು. ರಾಜಸ್ಥಾನ ಪರ ಟಾಮ್ ಕರ್ರನ್ 54 ರನ್, ಜೋಸ್ ಬಟ್ಲರ್ 21 ರನ್, ರಾಹುಲ್ ತಿವಾಠಿಯಾ 14 ರನ್ ಬಾರಿಸಿದರು. ಉಳಿದ ಎಲ್ಲ ಆಟಗಾರರು ಎರಡಂಕಿ ರನ್ ದಾಟಲು ಪರದಾಡಿದರು.
175 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಆರ್‌ಆರ್ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ನಾಯಕ ಸ್ಟೀವ್ ಸ್ಮಿತ್ 3 ರನ್‌ಗೆ ವಿಕೆಟ್ ಕಳೆದುಕೊಂಡರು. ಕಳೆದ ಎರಡು ಪಂದ್ಯಗಳಲ್ಲಿ ರಾಜಸ್ಥಾನ್ ಪರ ಭರ್ಜರಿಯಾಗಿ ಬ್ಯಾಟ್ ಬೀಸಿದ್ದ ಸ್ಯಾಮ್ಸನ್ ಕೂಡ 8 ರನ್‌ಗೆ ವಿಕೆಟ್ ಕಳೆದುಕೊಂಡರು. ಈ ಬೆನ್ನಲ್ಲೇ ಬಟ್ಲರ್ (21 ರನ್), ರಾಬಿನ್ ಉತ್ತಪ್ಪ (2) ಹಾಗೂ ರಿಯಾನ್ ಪರಾಗ್ (1) ಗೂ ಕೂಡ ಪೆವಿಲಿಯನ್ ಕಡೆಗೆ ಪರೇಡ್ ನಡೆಸಿದರು.
ಇತ್ತ ರಾಹುಲ್ ತಿವಾಠಿಯಾ 14 ರನ್ಗಳಿಸಿ ವರುಣ್ ಚಕ್ರವರ್ತಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಹಾಗೆಯೇ ಶ್ರೇಯಸ್ ಗೋಪಾಲ್ (5) ಹಾಗೂ ಜೋಫ್ರಾ ಆರ್ಚರ್ (6) ಕೂಡ ಬಂದ ವೇಗದಲ್ಲೇ ಹಿಂತಿರುಗಿದರು. ಕೊನೆಯಲ್ಲಿ ಟಾಮ್ ಕರ್ರನ್ ಕೊನೆಯ ಓವರಿನಲ್ಲಿ ಸಿಕ್ಸರ್ ಹಾಗೂ ಬೌಂಡರಿ ಚಚ್ಚುವ ಮೂಲಕ ಸೋಲಿನ ಅಂತರ ಕಡಿಮೆ ಮಾಡಿದರು.
PublicNext
30/09/2020 11:27 pm