ಅಬುಧಾಬಿ: ಕನ್ನಡಿಗ ದೇವದತ್ ಪಡಿಕ್ಕಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ವೀರಾವೇಷದ ಬ್ಯಾಟಿಂಗ್ ಸಹಾಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 8 ವಿಕೆಟ್‌ಗಳಿಂದ ಗೆದ್ದು ಬೀಗಿದೆ.
ಅಬುಧಾಬಿಯ ಶೇಖ್ ಜಾಹೇದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 15ನೇ ಪಂದ್ಯದಲ್ಲಿ ರಾಜಸ್ಥಾನ್ ನೀಡಿದ್ದ 155 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ 5 ಎಸೆತಗಳು ಬಾಕಿ ಇರುವಂತೆ 2 ವಿಕೆಟ್ ನಷ್ಟಕ್ಕೆ 158 ರನ್ ಚಚ್ಚಿ ಗೆದ್ದು ಬೀಗಿದೆ. ಆರ್‌ಸಿಬಿ ಪರ ಕನ್ನಡಿಗ ದೇವದತ್ ಪಡಿಕ್ಕಲ್ 63 ರನ್ (45 ಎಸೆತ, 6 ಬೌಂಡರಿ, 1 ಸಿಕ್ಸ್), ನಾಯಕ ವಿರಾಟ್ ಕೊಹ್ಲಿ ಔಟಾಗದೆ 72 ರನ್ (53 ಎಸೆತ, 7 ಬೌಂಡರಿ, 2 ಸಿಕ್ಸರ್) ಚಚ್ಚಿದರು.
155 ರನ್ ಗುರಿ ಬೆನ್ನಟ್ಟಿದ ಆರ್‌ಸಿಬಿ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. ಓಪನರ್ಗಳಾದ ಆ್ಯರೋನ್ ಫಿಂಚ್ ಕೇವಲ 8 ರನ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಪಡಿಕ್ಕಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಮಧ್ಯೆ ಪಡಿಕ್ಕಲ್ ಐಪಿಎಲ್ನಲ್ಲಿ ತಮ್ಮ ಮೂರನೇ ಅರ್ಧಶತಕ ಪೂರೈಸಿದರು. ಈ ಜೋಡಿಯು ಎರಡನೇ ವಿಕೆಟ್ ನಷ್ಟಕ್ಕೆ 99 ರನ್‌ಗಳ ಕೊಡುಗೆ ನೀಡಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿತು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ್ ತಂಡವು ಮಾಹಿಪಾಲ್ ಲಮ್ರೋರ್ 47 ರನ್ (39 ಎಸೆತ, 1 ಬೌಂಡರಿ, 3 ಸಿಕ್ಸರ್), ಜಾಸ್ ಬಟ್ಲರ್ 22 ರನ್ (12 ಎಸೆತ, 3 ಬೌಂಡರಿ, 1 ಸಿಕ್ಸ್) ಸಹಾಯದಿಂದ 6 ವಿಕೆಟ್ ನಷ್ಟಕ್ಕೆ 154 ರನ್ ದಾಖಲಿಸಿತ್ತು.
PublicNext
03/10/2020 07:27 pm