ವಾರಾಣಸಿ (ಉತ್ತರ ಪ್ರದೇಶ): ಇತ್ತೀಚಿನ ದಿನಗಳಲ್ಲಿ ಸೆಲೆಬ್ರೆಟಿಗಳಿಂದ ಹಿಡಿದು ಜನ ಸಾಮಾನ್ಯರವರೆಗೂ ಎಲ್ಲಿಗೆ ಹೋದರೂ ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡುವ ಕ್ರೇಜ್ ಎಲ್ಲರಲ್ಲಿಯೂ ಇದೆ.
ಸದ್ಯ ಇಲ್ಲೊಬ್ಬ ಕ್ರಿಕೆಟಿಗ ತಮ್ಮ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ಅಂಬಿಗನ ಪಾಲಿಗೆ ಮುಳುವಾಗಿದೆ.
ಹೌದು ಉತ್ತರ ಪ್ರದೇಶದ ವಾರಾಣಸಿಯಲ್ಲಿ ದೋಣಿ ವಿಹಾರದ ಸಂದರ್ಭದಲ್ಲಿ ಪಕ್ಷಿಗಳಿಗೆ ಆಹಾರ ತಿನ್ನಿಸುತ್ತಿರುವ ದೃಶ್ಯವನ್ನು ಹಂಚಿಕೊಂಡಿರುವ ಭಾರತೀಯ ಕ್ರಿಕೆಟಿಗ ಶಿಖರ್ ಧವನ್ ವಿವಾದಕ್ಕೀಡಾಗಿದ್ದಾರೆ. ಇದರಿಂದಾಗಿ ಬೋಟ್ ಮ್ಯಾನ್ (ಅಂಬಿಗ) ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಶಿಖರ್ ಧವನ್ ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಬೋಟ್ ಸವಾರಿ ವೇಳೆಯಲ್ಲಿ ಹಕ್ಕಿಗಳಿಗೆ ಆಹಾರ ತಿನ್ನಿಸುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
'ಹಕ್ಕಿಗಳಿಗೆ ಉಣಬಡಿಸುವುದರಲ್ಲಿ ಎಷ್ಟೊಂದು ಸಂತೋಷವಿದೆ' ಎಂದು ಕ್ಯಾಪ್ಷನ್ ಕೊಟ್ಟುಕೊಂಡು, ತಾವು ಹಕ್ಕಿಗಳಿಗೆ ಕಾಳು ಹಾಕಿರುವುದನ್ನು ಬರೆದುಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಡಳಿತವು, ಹಕ್ಕಿ ಜ್ವರ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಯಲ್ಲಿರುವುದರಿಂದ ಬೋಟ್ ಮ್ಯಾನ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.
ಪ್ರವಾಸಿಗರಿಗೆ ಎಲ್ಲವೂ ತಿಳಿದಿರುವುದಿಲ್ಲ ಬೋಟ್ ಮ್ಯಾನ್ ನಿಯಮಗಳನ್ನು ಹೇಳಬೇಕಿತ್ತು ಎಂದು ಅಲ್ಲಿಯ ಜಿಲ್ಲಾಡಳಿತ ಹೇಳಿದೆ.
PublicNext
25/01/2021 05:38 pm