ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸೋಲು ಕಂಡ ಟೀಂ ಇಂಡಿಯಾ ಮತ್ತೆ ಗೆಲುವಿನ ಲಯಕ್ಕೆ ಮರಳಲು ಭರ್ಜರಿ ಸಿದ್ಧತೆ ನಡೆಸಿದೆ. ಹೀಗಾಗಿ ಆಸೀಸ್ ವಿರುದ್ಧದ ಎರಡನೇ (ಬಾಕ್ಸಿಂಗ್ ಡೇ ಟೆಸ್ಟ್)ನಲ್ಲಿ ಭಾರತವು ತಂಡದಲ್ಲಿ ಪ್ರಮುಖ ಬದಲಾವಣೆ ತಂದಿದೆ.
ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತವರಿಗೆ ವಾಪಾಸಾಗಲಿದ್ದು, ಕೊಹ್ಲಿ, ರೋಹಿತ್ ಶರ್ಮಾ ಅನುಪಸ್ಥಿತಿ ಭಾರತಕ್ಕೆ ಸವಾಲಾಗುವ ಸಾಧ್ಯತೆಯಿದೆ. ಇತ್ತ ವೇಗದ ಬೌಲರ್ ಮೊಹಮ್ಮದ್ ಶಮಿ ಕೂಡ ಗಾಯಗೊಂಡಿರುವ ಕಾರಣ ಬಾಕ್ಸಿಂಗ್ ಡೇ ಟೆಸ್ಟ್‌ಗೆ ಅಲಭ್ಯವಾಗಲಿದ್ದಾರೆ. ಹೀಗಾಗಿ ಕನ್ನಡಿಗ ಕೆ.ಎಲ್.ರಾಹುಲ್ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಎಲ್ ರಾಹುಲ್ ಸುದೀರ್ಘ ಸಮಯದ ಬಳಿಕ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. ಅವರು ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಸ್ಥಾನವನ್ನು ತುಂಬುವ ಸಾಧ್ಯತೆಯಿದೆ. ಇತ್ತ ಮೊಹಮ್ಮದ್ ಶಮಿ ಸ್ಥಾನವನ್ನು ಮೊಹಮ್ಮದ್ ಸಿರಾಜ್ ತುಂಬಲಿದ್ದಾರೆ ಎನ್ನಲಾಗುತ್ತಿದೆ.
ಪೃಥ್ವಿ ಶಾ ಸತತವಾಗಿ ವೈಫಲ್ಯವನ್ನು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಶುಭ್ಮನ್ ಗಿಲ್‌ಗೆ ಅವಕಾಶ ದೊರೆಯುವ ಸಾಧ್ಯತೆಯಿದೆ. ಈ ಮೂಲಕ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಅನುಭವಿ ಆಟಗಾರ ವೃದ್ಧಿಮಾನ್ ಸಾಹ ಅವರನ್ನು ಕೈಬಿಟ್ಟು ರಿಷಭ್ ಪಂತ್ ಅವರಿಗೆ ಸ್ಥಾನ ನೀಡುವ ಚಿಂತನೆ ತಂಡದಲ್ಲಿ ನಡೆದಿದೆ ಎನ್ನಲಾಗಿದೆ.
PublicNext
20/12/2020 02:26 pm