ದುಬೈ: ಋತುರಾಜ್ ಗಾಯಕ್ವಾಡ್ ಹಾಗೂ ಅಂಬಾಟಿ ರಾಯುಡು ಆರ್ಭಟದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 8 ವಿಕೆಟ್‌ಗಳಿಂದ ಗೆದ್ದು ಬೀಗಿದೆ.
ದುಬೈ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ 44ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೊಹ್ಲಿ ಪಡೆಯು 146 ರನ್‌ಗಳ ಟಾರ್ಗೆಟ್ ನೀಡಿತ್ತು. ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ ಸಿಎಸ್‌ಕೆ 18.2 ಓವರ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 150 ರನ್ ಚಚ್ಚಿ ಭರ್ಜರಿ ಗೆಲುವು ದಾಖಲಿಸಿದೆ. ಚೆನ್ನೈ ಪರ ಋತುರಾಜ್ ಗಾಯಕ್ವಾಡ್ ಅಜೇಯ 65 ರನ್ (51 ಎಸೆತ, 4 ಬೌಂಡರಿ, 3 ಸಿಕ್ಸರ್), ಅಂಬಾಟಿ ರಾಯುಡು 39 ರನ್ (27 ಎಸೆತ, 3 ಬೌಂಡರಿ, 2 ಸಿಕ್ಸರ್), ಫಾಫ್ ಡುಪ್ಲೆಸಿಸ್ 25 ರನ್ (13 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ಎಂ.ಎಸ್.ಧೋನಿ 19 ರನ್ (21 ಎಸೆತ, 3 ಬೌಂಡರಿ) ಬಾರಿಸಿದರು.
146 ರನ್‌ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಫಾಫ್ ಡುಪ್ಲೆಸಿಸ್ ಹಾಗೂ ಋತುರಾಜ್ ಗಾಯಕ್ವಾಡ್ ಸ್ಫೋಟಕ ಆರಂಭ ಒದಗಿಸಿದರು. ಆರಂಭದಿಂದಲೇ ಬಿರುಸಿನ ಆಟ ಪ್ರದರ್ಶಿಸಿದ ಈ ಜೋಡಿ ಮೊದಲ 5 ಓವರಿನಲ್ಲಿ 46 ರನ್ ಚಚ್ಚಿದರು. ಆದರೆ 6ನೇ ಓವರ್ನ ಮೊದಲ ಎಸೆತದಲ್ಲೇ ಫಾಫ್ ಡುಪ್ಲೆಸಿಸ್ ಬಿಗ್ ಹಿಟ್ಗೆ ಮುಂದಾಗಿ ನವದೀಪ್ ಸೈನಿಗೆ ವಿಕೆಟ್ ಒಪ್ಪಿಸಿದರು.
ಪವರ್ಪ್ಲೇ ಮುಕ್ತಾಯದ ವೇಳೆಗೆ 48 ರನ್ ಗಳಿಸಿದ್ದ ಸಿಎಸ್‌ಕೆ, ಆ ಬಳಿಕ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿತು. ಬಳಿಕ ಅಂಬಾಟಿ ರಾಯುಡು ಆರ್ಭಟಿಸಲು ಆರಂಭಿಸಿದರೆ, ಋತುರಾಜ್ ಸಿಕ್ಕ ಅವಕಾಶವನ್ನು ಬಳಸಿಕೊಂಡು ಬಿರುಸಿನ ಆಟ ಪ್ರದರ್ಶಿಸಿದರು. ಆದರೆ 14ನೇ ಓವರಿನಲ್ಲಿ ರಾಯುಡು (39 ರನ್) ಕ್ಲೀನ್ ಬೌಲ್ಡ್ ಆದರು. ನಂತರ ಬಂದ ಎಂ.ಎಸ್.ಧೋನಿ ಕೂಡ ಅಬ್ಬರಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಕೊಹ್ಲಿ ಪಡೆಯು 6 ವಿಕೆಟ್ ನಷ್ಟಕ್ಕೆ 145 ರನ್‌ಗಳನ್ನು ಗಳಿಸಿತ್ತು. ಆರ್‌ಸಿಬಿ ಪರ ವಿರಾಟ್ ಕೊಹ್ಲಿ 50 ರನ್ (43 ಎಸೆತ, 1 ಬೌಂಡರಿ, 1 ಸಿಕ್ಸರ್), ಎಬಿ ಡಿವಿಲಿಯರ್ಸ್ 39 ರನ್ (36 ಎಸೆತ, 4 ಬೌಂಡರಿ), ಆರೋನ್ ಫಿಂಚ್ 15 ರನ್, ದೇವದತ್ ಪಡಿಕ್ಕಲ್ 22 ರನ್ ದಾಖಲಿಸಿದ್ದರು.
PublicNext
25/10/2020 06:48 pm