ಶಾರ್ಜಾ: ನಾಯಕ ಎಂ.ಎಸ್.ಧೋನಿ, ಅನುಭವಿ ಆಟಗಾರರಾದ ಫಾಫ್ ಡುಪ್ಲೆಸಿಸ್, ಅಂಬಟಿ ರಾಯುಡು ಸೇರಿದಂತೆ ಎಲ್ಲರ ಬ್ಯಾಟಿಂಗ್ ವೈಫಲ್ಯದ ಪರಿಣಾಮ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್‌ಗೆ ಕೇವಲ 115 ರನ್‌ಗಳ ಗುರಿ ನೀಡಿದೆ.
ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್-13ನೇ ಆವೃತ್ತಿಯ 41ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಸಿಎಸ್‌ಕೆ 9 ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿತು. ತಂಡದ ಪರ ಸ್ಯಾಮ್ ಕರ್ರನ್ 52 ರನ್ (47 ಎಸೆತ, 4 ಬೌಂಡರಿ, 2 ಸಿಕ್ಸರ್) ಹೊರತುಪಡಿಸಿ ಉಳಿದ ಆಟಗಾರರು ವೈಪಲ್ಯ ಮೆರೆದರು.
ನಾಯಕ ಎಂ.ಎಸ್.ಧೋನಿ 16 ರನ್, ಫಾಫ್ ಡು ಪ್ಲೆಸಿಸ್ 1 ರನ್, ಅಂಬಟಿ ರಾಯುಡು 2 ರನ್, ರವೀಂದ್ರ ಜಡೇಜಾ 7 ರನ್ ಗಳಿಸಿದರೆ, ದೀಪಕ್ ಚಹಾರ್, ಋತುರಾಜ್ ಗಾಯಕವಾಡ್ ಹಾಗೂ ನಾರಾಯಣ್ ಜಗದೀಶನ್ ಒಂದೇ ಒಂದು ರನ್ ಗಳಿಸದೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಸ್ಯಾಮ್ ಕರ್ರನ್ ಏಕಾಂಗಿ ಹೋರಾಟಕ್ಕೆ ಶಾರ್ದುಲ್ ಠಾಕೂರ್ ಸಾಥ್ ನೀಡಿದರು. ಈ ಜೋಡಿಯು ಎಂಟನೇ ವಿಕೆಟ್ ನಷ್ಟಕ್ಕೆ 28 ರನ್‌ಗಳ ಕೊಡುಗೆ ನೀಡಿತು.
11 ರನ್ ಗಳಿಸಿದ್ದ ಶಾರ್ದುಲ್ ಠಾಕೂರ್ ವಿಕೆಟ್ ಒಪ್ಪಿಸಿ ಹೊರ ನಡೆದರು. ಬಳಿಕ ಬಂದ ಇಮ್ರಾನ್ ತಾಹಿರ್ ಅಜೇಯ 13 ರನ್ ಗಳಿಸಿದರೆ, ಕೊನೆಯ ಎಸೆತದಲ್ಲಿ ಸ್ಯಾಮ್ ಕರ್ರನ್ ವಿಕೆಟ್ ಒಪ್ಪಿಸಿದರು.
ಮುಂಬೈ ಇಂಡಿಯನ್ಸ್ ಪರ ಟ್ರೆಂಟ್ ಬೌಲ್ಟ್ 4 ವಿಕೆಟ್ ( 4 ಓವರ್, 1 ಮೇಡನ್, 18 ರನ್), ಜಸ್‌ಪ್ರೀತ್ ಬುಮ್ರಾ, ರಾಹುಲ್ ಚಹರ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರೆ, ನಾಥನ್ ಕೌಲ್ಟರ್-ನೈಲ್ ಒಂದು ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು. ಕ್ರುನಾಲ್ ಪಾಂಡ್ಯ ಯಾವುದೇ ವಿಕೆಟ್ ಪಡೆಯದಿದ್ದರೂ ರನ್ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
PublicNext
23/10/2020 09:21 pm