ಸಿಡ್ನಿ(ಆಸ್ಟ್ರೇಲಿಯಾ): ಬಾಹ್ಯಾಕಾಶ ಎಂದರೆ ಬಗೆದಷ್ಟು ವಿಸ್ಮಯ. ತಿಳಿದಷ್ಟು ಕುತೂಹಲ. ಈಗ ಅದೇ ಬಾಹ್ಯಾಕಾಶದಲ್ಲಿ ಮತ್ತೊಂದು ಕೌತುಕ ಘಟಿಸಿದೆ. ನಕ್ಷತ್ರದ ರೀತಿಯಲ್ಲಿ ಪ್ರಕಾಶಮಾನವಾದ ಬೆಳಕು ಕಾಣುತ್ತಿದ್ದು ಇದು ವಿಜ್ಞಾನಿಗಳ ನಿದ್ದೆಗೆಡಿಸಿದೆ. ಹಾಗೂ ಹಲವು ದೇಶಗಳ ಖಗೋಳ ಶಾಸ್ತ್ರಜ್ಞರು ಇದರ ಬೆನ್ನಟ್ಟಿದ್ದಾರೆ.
ಪ್ರತಿ 18 ನಿಮಿಷಗಳಿಗೊಮ್ಮೆ ಈ ಬೆಳಕು ಕಾಣುತ್ತಿದ್ದು, ಇದು ಕಾಣುತ್ತಿರುವ ದಿಕ್ಕಿನಲ್ಲಿ ಮರ್ಚಿಸನ್ ವೈಡ್‌ಫೀಲ್ಡ್ ಅರೇ ಎಂಬ ದೂರದರ್ಶಕವನ್ನು ಬಳಸಿ ಖಗೋಳ ವಿಜ್ಞಾನಿ ನತಾಶಾ ಹರ್ಲಿ-ವಾಕರ್ ಅವರು ಇದನ್ನು ವೀಕ್ಷಿಸಿದ್ದಾರೆ. ಆಗ ಈ ಬೆಳಕು ಆನ್-ಆಫ್ ಆಗಿದ್ದು ಕಂಡುಬಂದಿದೆ. ಈ ಬೆಳಕು ಭೂಮಿಯಿಂದ 4 ಸಾವಿರ ಜ್ಯೋತಿರ್ವರ್ಷಗಳ ದೂರದಲ್ಲಿದೆ. ಹಾಗೂ ಊಹಿಸಲಾಗದಷ್ಟು ಪ್ರಕಾಶಮಾನವಾಗಿದೆ. ಅತ್ಯಂತ ಪ್ರಬಲ ಕಾಂತೀಯ ಕ್ಷೇತ್ರವನ್ನೂ ಹೊಂದಿದೆ ಎಂಬುದು ಇಲ್ಲಿಯವರೆಗೆ ತಿಳಿದು ಬಂದ ಮಾಹಿತಿ.
ಇದು ಏಲಿಯನ್‌ಗಳು ಕಳುಹಿಸುತ್ತಿರುವ ಸಿಗ್ನಲ್‌ಗಳು ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಇದು ಬಿಳಿ ಕುಬ್ಜ ಅಥವಾ ಹಳೆಯ ನಕ್ಷತ್ರ ಅವಶೇಷವೂ ಆಗುರಬಹುದು ಎಂಬ ಅಭಿಪ್ರಾಯ ಹೇಳುತ್ತಿದ್ದಾರೆ. ಒಟ್ಟಾರೆ "ಬಾಹ್ಯಾಕಾಶದ ಭಾರಿ ಬೆಳಕು" ಕುತೂಹಲ ಮೂಡಿಸಿದ್ದು ಸಂಶೋಧನೆ ಮೂಲಕವೇ ಇದೇನು ಎಂಬುದರ ಬಗ್ಗೆ ಮಾಹಿತಿ ತಿಳಿದು ಬರಬೇಕಿದೆ.
PublicNext
27/01/2022 11:01 pm