ಮಂಡಿ(ಹಿಮಾಚಲ ಪ್ರದೇಶ): ಮಂತ್ರ ಪಠಣ ಮಾಡಿ ತಮ್ಮ ಸ್ನೇಹಿತರ ಮನೆಯಿಂದ ದೆವ್ವಗಳನ್ನು ಓಡಿಸಿದ್ದಾಗಿ ಮಂಡಿ ಐಐಟಿ ನಿರ್ದೇಶಕ ಪ್ರೊ. ಲಕ್ಷ್ಮೀಧರ್ ಬೆಹೆರಾ ಹೇಳಿದ್ದಾರೆ.
ಈ ಬಗ್ಗೆ ಅವರು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. 1993ರಲ್ಲಿ ನಡೆದ ಘಟನೆಯೊಂದರ ಬಗ್ಗೆ ಮಾತನಾಡಿದ ಅವರು, ಚೆನ್ನೈ ನಗರದ ಅಪಾರ್ಟ್‌ಮೆಂಟ್ ಒಂದರ ತಮ್ಮ ಸ್ನೇಹಿತರೊಬ್ಬರ ಮನೆಯಲ್ಲಿ ದೆವ್ವಗಳು ಇದ್ದವು. ಒಂದು ದಿನ ನಾನು ಇನ್ನಿಬ್ಬರು ಸ್ನೇಹಿತರೊಂದಿಗೆ ಸಂಜೆ ಏಳು ಗಂಟೆಗೆ ಆತನ ಮನೆಗೆ ಹೋಗಿದ್ದೆವು. ಅಲ್ಲಿ ಅವರ ತಂದೆ ಕೂಡ ಇದ್ದರು. ನಡೆಯಲು ಕೂಡ ಕಷ್ಟ ಪಡುತ್ತಿದ್ದ ಆ ವ್ಯಕ್ತಿ ಇದ್ದಕ್ಕಿದ್ದಂತೆಯೇ ರೌದ್ರನರ್ತನ ಮಾಡಲಾರಂಭಿಸಿದರು. ಅವರ ತಲೆ ಬಹುತೇಕ ಮನೆಯ ಛಾವಣಿ ಮುಟ್ಟಲಾರಂಭಿಸಿತು. ಹೀಗಾಗಿ ಆತನ ಮೈಮೇಲೆ ಭೂತ ಬಂದಿದೆ ಎಂಬುದು ನಮಗೆ ಖಚಿತವಾಯಿತು. ಈ ವೇಳೆ ಹರೇ ರಾಮ ಹರೇ ಕೃಷ್ಣ ಎಂಬ ಮಂತ್ರ ಪಠಣ ಆರಂಭಿಸಿದೆ. ಆಗ ಸ್ನೇಹಿತನ ತಂದೆಯ ಮೇಲೆ ಬಂದಿದ್ದ ಭೂತ ಬಿಟ್ಟು ಹೋಯಿತು.
ಇದಾದ ಬಳಿಕ ಸ್ನೇಹಿತನ ತಾಯಿ, ಹಾಗೂ ಹೆಂಡತಿಗೂ ದೆವ್ವ ಹಿಡಿಯಿತು. ಆಗಲೂ ಸುಮಾರು 45 ನಿಮಿಷಗಳಿಂದ ಒಂದು ಗಂಟೆ ಕಾಲ ಮತ್ತದೇ ಮಂತ್ರ ಪಠಣದ ಮೂಲಕ ದೆವ್ವಗಳನ್ನು ಅವರ ಮನೆಯಿಂದ ಓಡಿಸಿದೆ ಎಂದಿದ್ದಾರೆ. ಹರೇ ರಾಮ ಹರೇ ಕೃಷ್ಣ ಎಂಬ ಹೆಸರುಗಳಿಗೆ ಅಷ್ಟೊಂದು ಶಕ್ತಿ ಇದೆ. ಈ ಜಗತ್ತಿನಲ್ಲಿ ದೆವ್ವಗಳಿರುವುದು ಸತ್ಯ ಎಂದು ಪ್ರೊ. ಲಕ್ಷ್ಮೀಧರ್ ಬೆಹೆರಾ ಹೇಳಿದ್ದಾರೆ.
ಪ್ರೊ. ಲಕ್ಷ್ಮೀಧರ್ ಬೆಹೆರಾ ಇತ್ತೀಚೆಗೆಷ್ಟೇ ಹಿಮಾಚಲ ಪ್ರದೇಶದ ಮಂಡಿ ಐಐಟಿ ನಿರ್ದೇಶಕರಾಗಿ ನೇಮಕವಾಗಿದ್ದಾರೆ.
PublicNext
16/01/2022 04:18 pm