ಪಬ್ಲಿಕ್ ನೆಕ್ಸ್ಟ್ ವರದಿ
ಮಂಗಳೂರು: ಇದು ಪೆಟ್ರೋಲ್ - ಡೀಸೆಲ್ ಇಲ್ಲದೆ, ಸದ್ದೇ ಮಾಡದೆ ಓಡಾಡುವ ಬೈಕ್. ಸದ್ಯಕ್ಕೆ ಈ ಬೈಕ್ ರಸ್ತೆಯಲ್ಲಿ ಓಡಾಟ ಮಾಡೋದಿಲ್ಲ. ಈ ಬೈಕನ್ನು ಅಭಿವೃದ್ಧಿಪಡಿಸಿರುವುದು ಕುದುರೆಮುಖ ರಾಷ್ಟ್ರೀಯ ಅಭಯಾರಣ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಓಡಾಟಕ್ಕೆಂದು. ಈಗಾಗಲೇ ಪ್ರಾಯೋಗಿಕವಾಗಿ ಕುದುರೆಮುಖ ಅಭಯಾರಣ್ಯದಲ್ಲಿ ಓಡಾಡಿದೆ.
ನಗರದ ಎನ್ಐಟಿಕೆ ಸೆಂಟರ್ ಫಾರ್ ಸಿಸ್ಟಮ್ 'ವಿಧ್ ಯುಗ್ 4.0' ಹೆಸರಿನ ಈ ಇ-ಬೈಕ್ ಸೋಲಾರ್ ಶಕ್ತಿಯಿಂದಲೇ ಓಡಾಡುತ್ತೆ. ವಿಶೇಷವಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಓಡಾಟಕ್ಕೆಂದೇ ಅಭಿವೃದ್ಧಿ ಪಡಿಸಲಾಗಿದೆ. 'ವಿಧ್ ಯುಗ್ 4.0' ಇ-ಬೈಕ್ ಸೋಲಾರ್ ಶಕ್ತಿಯಿಂದ ಚಾರ್ಜ್ ಮಾಡಿದ ಬ್ಯಾಟರಿಯಿಂದ ಸಂಚರಿಸುವುದರಿಂದ ಇಂಧನ ದಹಿಸುವ ಸ್ಟ್ರೋಕ್ ಇಂಜಿನ್ ಅಳವಡಿಕೆ ಮಾಡಿಲ್ಲ. ಬದಲು ಬ್ರಶ್‌ಲೆಸ್ ಡಿಸಿ ಹಬ್ ಮೋಟಾರ್ ಇಂಜಿನ್ ಅಳವಡಿ ಸಲಾಗಿದೆ. ಇದರಿಂದ ಬೈಕ್ ಸದ್ದು ಮಾಡದೆ ಚಲಿಸಬಲ್ಲುದು, ಶಬ್ದ ಮಾಲಿನ್ಯವೂ ಇಲ್ಲ, ಕಾಡುಪ್ರಾಣಿಗಳಿಗೂ ಕಿರಿಕಿರಿಯಿಲ್ಲ. ಕಾಡುಗಳ್ಳರ, ಬೇಟೆಗಾರರ ಮೇಲೆ ದಾಳಿ ನಡೆಸಲು ಸದ್ದಿಲ್ಲದೆ ಬರಲು ಅನುಕೂಲ.
ಈ ಬೈಕ್ ನಲ್ಲಿ ಬ್ಯಾಟರಿ ಚಾರ್ಜ್ಗೆ ಪ್ರತ್ಯೇಕ ಮೂವೇಬಲ್ ಸೋಲಾರ್ ಪ್ಯಾನೆಲ್ ಚಾರ್ಜರ್ ಯುನಿಟ್ ಇದೆ. ವಾಕಿಟಾಕಿ, ಮೊಬೈಲ್, ಜಿಪಿಎಸ್ ಚಾರ್ಜ್ ಮಾಡಲು ಪ್ರತ್ಯೇಕ ವ್ಯವಸ್ಥೆ ಇದೆ. ಹಿಂಭಾಗ ನೀರಿನ ಟ್ಯಾಂಕ್, ದಾಖಲೆ ಪತ್ರ ಇಡಲು ವಾಟರ್ ಪ್ರೂಫ್ ಬಾಕ್ಸ್ ಫಿಕ್ಸ್ ಮಾಡಲಾಗಿದೆ. 3 ಗಂಟೆ ಚಾರ್ಜ್ ಮಾಡಿದರೆ ಈ ಬೈಕ್ 1 ಬ್ಯಾಟರಿಗೆ 70 ಕಿ.ಮೀ. ಮೈಲೇಜ್ ನೀಡಲಿದ್ದು, 80 ಕಿ.ಮೀ. ವೇಗದಲ್ಲಿ ಓಡುತ್ತದೆ. ಒಂದೂವರೆ ಲಕ್ಷ ರೂ. ವೆಚ್ಚದಲ್ಲಿ 'ವಿಧ್ ಯುಗ್ 4.0' ಇ-ಬೈಕ್ ನಿರ್ಮಿಸಲಾಗಿದೆ.
PublicNext
22/11/2021 04:54 pm