ರಾಯಚೂರು : ಪ್ರಸ್ತುತ ಸರ್ಕಾರಕ್ಕೆ ಅನುದಾನದ ಕೊರತೆ ಕಾಡುತ್ತಿದೆ ಎಂದನಿಸುತ್ತಿದೆ. ಹಿಂದುಳಿದ, ಮಹಾತ್ವಕಾಂಕ್ಷಿ ಜಿಲ್ಲೆಯಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಅನುದಾನ ನೀಡಬೇಕಾಗಿದ್ದ ಡಬಲ್ ಇಂಜಿನ್ ಬಿಜೆಪಿ ಸರ್ಕಾರದ ಖಜಾನೆಯಲ್ಲಿ ಶಾಲಾ ಮಕ್ಕಳ ಬಿಸಿಯೂಟ ಖರ್ಚು ವೆಚ್ಚ ನೀಡಲು ಹಣವಿಲ್ಲದ ದಿವಾಳಿ ಸ್ಥಿತಿಯಲ್ಲಿರುವುದು ಬೆಳಕಿಗೆ ಬಂದಿದೆ.
ಬಿಸಿಯೂಟ ಅನುದಾನ ಬಿಡುಗಡೆಗೆ ಸಂಬಂಧಿಸಿ ಶಿಕ್ಷಕರು ಪದೇ ಪದೇ ಜಿಲ್ಲಾ ಪಂಚಾಯತ್ ಆಡಳಿತಕ್ಕೆ ಮನವಿ ಮಾಡಿದರೂ, ಯಾವುದೇ ಪ್ರಯೋಜನಗವಾಗಿಲ್ಲ. ರಾಜ್ಯ ಸರ್ಕಾರದಿಂದಲೇ ಬಿಸಿಯೂಟ ಸಾದಿಲ್ವಾರು ಖರ್ಚುವೆಚ್ಚ ಬಿಡುಗಡೆಗೊಳ್ಳದಿರುವುದರಿಂದ ಸಂಬಂಧಪಟ್ಟ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಅಸಹಾಯಕತೆಯಿಂದ ಕೈಚೆಲ್ಲಿ ಕುಳಿತಿದ್ದರೆ, ಶಿಕ್ಷಕರಿಗೆ ಮಾತ್ರ ಬಿಸಿಯೂಟ ಬೋಧನಾ ಚಟುವಟಿಕೆಗಳಿಗಿಂತ ಪ್ರಮುಖವಾಗಿದ್ದರಿಂದ ಸಾಲಸೋಲ, ಇಲ್ಲವೆ ತಮ್ಮ ವೇತನ ಹಣ ಬಳಸಿ, ಮಕ್ಕಳಿಗೆ ಬಿಸಿಯೂಟ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ.
ಕಳೆದ 4 ತಿಂಗಳಿಂದ ಜಿಲ್ಲೆಯ 7 ತಾಲೂಕು ಶಾಲೆಗಳ ಬಿಸಿಯೂಟ ಪೂರೈಕೆಯ ಸಾದಿಲ್ವಾರು ಖರ್ಚುವೆಚ್ಚ ಬಿಡುಗಡೆಗೊಳ್ಳದಿರುವುದರಿಂದ ಮೊಟ್ಟೆ, ತರಕಾರಿ ಹಾಗೂ ಇನ್ನಿತರ ದಿನಸಿಗಳಿಗಾಗಿ ಪ್ರತಿನಿತ್ಯ 500 ರಿಂದ 1 ಸಾವಿರ ರೂ. ವೆಚ್ಚವಾಗುತ್ತದೆ. ರಾಜ್ಯ ಸರ್ಕಾರ ಸಕಾಲಕ್ಕೆ ಅನುದಾನ ನೀಡದಿರುವುದು, ಶಾಲಾ ಶಿಕ್ಷಕರು ಇತ್ತ ಖರ್ಚು ನಿರ್ವಹಿಸಲಾಗದೆ, ಅತ್ತ ಬಿಸಿಯೂಟ ಸ್ಥಗಿತಗೊಳಿಸದೆ, ಅಡಕತ್ತಿನ ಪರಿಸ್ಥಿತಿಯಲ್ಲಿ ಅವರಿವರನ್ನು ಕಾಡಿ, ಬೇಡಿ ಮಕ್ಕಳ ಬಿಸಿಯೂಟ ಸಿದ್ಧತೆಗೆ ಹಣ ಹೊಂದಿಸುವ ಹೀನಾಯ ಸ್ಥಿತಿ ಜಿಲ್ಲೆಯ ಶಿಕ್ಷಕರದ್ದಾಗಿದೆ.
ಒಟ್ಟಾರೆಯಾಗಿ ಶಾಲಾ ಮಕ್ಕಳಿಗೆ ಬಿಸಿಯೂಟ ಅನುದಾನ ಬಿಡುಗಡೆಗೊಳಿಸದ ದಿವಾಳಿಯಲ್ಲಿರುವ ಸರ್ಕಾರದಿಂದಾಗಿ ಜಿಲ್ಲೆಯ ಬಿಸಿಯೂಟ ವ್ಯವಸ್ಥೆ ಅಸ್ತವ್ಯಸ್ತಗೊಂಡು ಯಾವ ಕ್ಷಣದಲ್ಲಿ ಏಲ್ಲಿ ಬಿಸಿಯೂಟ ಸ್ಥಗಿತಗೊಳ್ಳುತ್ತದೋ? ಎನ್ನುವುದು ತಿಳಿಯದ ಆತಂಕ ಶಿಕ್ಷಕರನ್ನು ಕಾಡುತ್ತಿದೆ.
PublicNext
23/09/2022 01:30 pm