ತಿರುವನಂತಪುರಂ: ಕರ್ನಾಟಕ, ಕೇರಳ ಸೇರಿದಂತೆ 13 ರಾಜ್ಯಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮೇಲೆ ನಡೆದಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ ದಾಳಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಬಲಿಸಿದ್ದಾರೆ.
ಹೌದು. ದೇಶದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಹಣ ಸಂದಾಯ ಮಾಡಿದ ಪ್ರಮುಖ ಆರೋಪ ಎದುರಿಸುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಚೇರಿ, ಮುಖಂಡರು ಮನೆ ಮೇಲೆ ಎನ್ಐಎ ದಾಳಿ ಮಾಡಿದೆ. ಬಹುತೇಕ ದಾಳಿಗಳನ್ನು ಬಿಜೆಪಿ ಪೋಷಿತ ಎಂದಿದ್ದ ರಾಹುಲ್ ಗಾಂಧಿ ಇದೀಗ ಪಿಎಫ್ಐ ಮೇಲಿನ ದಾಳಿಯನ್ನು ಬೆಂಬಲಿಸಿದ್ದಾರೆ. ಕೋಮುವಾದ, ದ್ವೇಷ, ಹಿಂಸಚಾರದ ರಾಜಕೀಯಕ್ಕೆ ಎಳ್ಳಷ್ಟು ಜಾಗ ನೀಡಬಾರದು. ಇದನ್ನು ಬೇರು ಸಹಿತ ಕಿತ್ತು ಹಾಕಬೇಕು ಎಂದು ದಾಳಿಯನ್ನು ಬೆಂಬಲಿಸಿದ್ದಾರೆ.
ಈ ಕುರಿತಾಗಿ ಗುರುವಾರ್ ಎರ್ನಾಕುಲಂನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಎಲ್ಲ ರೀತಿಯ ಕೋಮುವಾದವು ಎಲ್ಲಿಂದ ಬಂದರೂ ಅದನ್ನು ಎದುರಿಸಬೇಕು. ಅದರ ಬಗ್ಗೆ ಶೂನ್ಯ ಸಹಿಷ್ಣುತೆ ಇರಬೇಕು. ಕೋಮುವಾದ ಮತ್ತು ದ್ವೇಷ ಮತ್ತು ಹಿಂಸಾಚಾರದ ರಾಜಕೀಯವನ್ನು ನಿಯಂತ್ರಿಸಲು ಪಿಎಫ್‌ಐ ಮೇಲೆ ದೇಶವ್ಯಾಪಿ ನಡೆದಿರುವ ದಾಳಿಗಳು ಅಗತ್ಯ" ಎಂದು ಹೇಳಿದ್ದಾರೆ.
PublicNext
22/09/2022 07:46 pm