ಹೈದರಾಬಾದ್ : ರಾಜಕೀಯವಾಗಿ ಎಲ್ಲರ ಗಮನ ಸೆಳೆದಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ನಡುವಿನ ಭೇಟಿ ಹೈದರಾಬಾದ್ʼನಲ್ಲಿಂದು ಸರಿಸುಮಾರು ಮೂರು ಗಂಟೆಗಳ ಕಾಲ ನಡೆಯಿತು.
ಈ ಭೇಟಿಯ ಫಲಶ್ರುತಿಯಾಗಿ ದಸರಾ-ವಿಜಯದಶಮಿಗೆಲ್ಲ ದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಪರ್ಯಾಯವಾದ ರಾಜಕೀಯ ಶಕ್ತಿಯೊಂದು ಹೊರಹೊಮ್ಮಲಿದೆ. ಆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ತಮ್ಮ ಜತೆಯಲ್ಲೇ ಇರಬೇಕು ಎಂದು ಕೆ.ಚಂದ್ರಶೇಖರ್ ರಾವ್ ಅವರು ಮನವಿ ಮಾಡಿದ್ದಾರೆ.
ಇಂದು ಮಧ್ಯಾಹ್ನ ಒಂದು ಗಂಟೆಗೆ ತೆಲಂಗಾಣ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ʼಪ್ರಗತಿ ಭವನʼಕ್ಕೆ ಆಗಮಿಸಿದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕೆ.ಚಂದ್ರಶೇಖರ್ ರಾವ್ ಅವರು, ಮತ್ತವರ ಸಂಪುಟ ಸದಸ್ಯರು ಅತ್ಯಂತ ಆದರಪೂರ್ವಕವಾಗಿ ಬರಮಾಡಿಕೊಂಡರು. ಬಳಿಕ ಇಬ್ಬರೂ ನಾಯಕರು ಮಧ್ಯಾಹ್ನದ ಭೋಜನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳನ್ನು ಆತ್ಮೀಯವಾಗಿ ಸತ್ಕರಿಸಿದ ಕೆಸಿಆರ್ ಅವರು, ಬೆಳ್ಳಿಯ ಶ್ರೀ ಸರಸ್ವತಿ ವೀಣೆಯನ್ನು ನೀಡಿ ಗೌರವಿಸಿದರು.
ಸುದೀರ್ಘ ಸಮಾಲೋಚನೆ:
ಕರ್ನಾಟಕ-ತೆಲಂಗಾಣ ಹಾಗೂ ರಾಷ್ಟ್ರ ರಾಜಕಾರಣದ ಬಗ್ಗೆ ಇಬ್ಬರೂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಕೆ.ಚಂದ್ರಶೇಖರ್ ರಾವ್ ಅವರು ಮೂರು ತಾಸಿಗೂ ಹೆಚ್ಚು ಕಾಲ ಮಹತ್ವದ ಮಾತುಕತೆ ನಡೆಸಿದರು.ಮುಖ್ಯವಾಗಿ ರಾಷ್ಟ್ರ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳು ವಹಿಸಬೇಕಾದ ಗುರುತರ ಪಾತ್ರದ ಬಗ್ಗೆ ಇಬ್ಬರೂ ನಾಯಕರು ಸುದೀರ್ಘ ಸಮಾಲೋಚನೆ ನಡೆಸಿದರು.
ಅಲ್ಲದೆ, ರಾಷ್ಟ್ರ ಮಟ್ಟದಲ್ಲಿ ಹೊರಹೊಮ್ಮಲಿರುವ ಪರ್ಯಾಯ ರಾಜಕೀಯ ಕೂಟದ ಬಗ್ಗೆಯೂ ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡಿದ ಕೆಸಿಆರ್ ಅವರು, ಮುಂದಿನ ದಿನಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಕೋರಿದರು. ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಪರ್ಯಾಯವಾಗಿ ರೂಪುಗೊಳ್ಳಲಿರುವ ರಾಜಕೀಯ ವ್ಯವಸ್ಥೆ ಹೇಗಿರುತ್ತದೆ? ಅದರ ಧ್ಯೇಯೋದ್ದೇಶಗಳು? ಯಾವ ದಿಕ್ಕಿನಲ್ಲಿ ಕೆಲಸ ಮಾಡಬೇಕು? ಎಂಬ ಮಾಹಿತಿಯನ್ನು ಕೆಸಿಆರ್ ಅವರು ನೀಡಿದರು.
-ಪ್ರವೀಣ್ ರಾವ್
PublicNext
11/09/2022 10:45 pm