ಬೆಂಗಳೂರು : ಬಾಕಿ ಬಿಲ್ ಪಾವತಿ ಮಾಡದೆ ಇದ್ದರೆ ಅನಿರ್ದಿಷ್ಟಾವ ಹೋರಾಟ ನಡೆಸುವುದರ ಜೊತೆಗೆ, ಆತ್ಮಹತ್ಯೆ ಮಾಡಿ ಕೊಳ್ಳುವ ಬೆದರಿಕೆ ಹಾಕಿರುವ ಗುತ್ತಿಗೆದಾರರ ಸಂಘಟನೆಗಳು ಮತ್ತೊಮ್ಮೆ ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿವೆ. ಜೊತೆಗೆ 40% ಇದ್ದ ಕಮಿಷನ್ ದಂಧೆ ಶೇ.50ಕ್ಕೆ ಹೆಚ್ಚಾಗಿದೆ ಎಂಬ ಗಂಭೀರ ಆರೋಪವೂ ಕೇಳಿ ಬಂದಿದೆ.
ಸಮಾಜ ಕಲ್ಯಾಣ ಇಲಾಖೆಯಲ್ಲಿ 100ಕ್ಕೂ ಹೆಚ್ಚು ಕಟ್ಟಡಗಳನ್ನು ನಿರ್ಮಿಸಿರುವ ವಸತಿ ಶಿಕ್ಷಣ ಶಾಲೆಗಳ ಸಂಘದ ಗುತ್ತಿಗೆದಾರರ ಸಂಘ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, ಬಾಕಿ ಇರುವ 1200 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದೆ.
ಹಲವು ವರ್ಷಗಳಿಂದ ಸಾಲ ಮಾಡಿ ಕೆಲಸ ಮಾಡಿದ್ದೇವೆ. ಸರ್ಕಾರದಿಂದ ಬಾಕಿ ಪಾವತಿಯಾಗದೆ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಣಕಾಸಿನ ಸಮಸ್ಯೆಯಿಂದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಕಾರ್ಮಿಕರಿಗೆ ಹಾಗೂ ಕಚ್ಚಾ ಸರಕು ಖರೀದಿಯ ಹಣ ಪಾವತಿ ಮಾಡಲಾಗಿಲ್ಲ. ಸಾಲದ ಬಡ್ಡಿ ಪಾವತಿಸಲಾಗುತ್ತಿಲ್ಲ. ಆರ್ಥಿಕ ಮುಗ್ಗಟ್ಟಿನಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಬಿಬಿಎಂಪಿಯಲ್ಲಿರುವ ಶೇ.50ರಷ್ಟು ಕಮಿಷನ್ ರದ್ದುಗೊಳಿಸಬೇಕು ಹಾಗೂ ಬಾಕಿ ಇರುವ ಗುತ್ತಿಗೆದಾರರ ಸಾವಿರಾರು ಕೋಟಿ ಬಾಕಿ ಬಿಲ್ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ, ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘ ಎಚ್ಚರಿಸಿದೆ.
PublicNext
25/08/2022 08:43 pm