ಹೈದ್ರಾಬಾದ್: ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ, ವಿಧಾನಪರಿಷತ್ ಸದಸ್ಯೆ ಕೆ ಕವಿತಾ ಅವರು ಲಿಕ್ಕರ್ ಮಾಫಿಯಾ ಹಾಗೂ ಆಮ್ ಆದ್ಮಿ ಪಕ್ಷದ ನಡುವಿನ ಮಧ್ಯವರ್ತಿ ಆಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಸದ್ಯ ದೆಹಲಿಯಲ್ಲಿ ಮದ್ಯನೀತಿ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿರುವಾಗಲೇ ಬಿಜೆಪಿ ಈ ರೀತಿ ಗಂಭೀರ ಆರೋಪ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕವಿತಾ ಈ ಆರೋಪ ನಿರಾಧಾರವಾಗಿದೆ. ಎಲ್ಲ ಏಜೆನ್ಸಿಗಳನ್ನು ಬಿಜೆಪಿ ನಾಯಕರೇ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ತಮ್ಮ ಅಗತ್ಯಕ್ಕೆ ತಕ್ಕಂತೆ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಗೆ ಕರೆದರೆ ನಾನು ಎಲ್ಲ ರೀತಿಯಿಂದಲೂ ಸಿದ್ಧ ಕೇಂದ್ರ ಸರ್ಕಾರವನ್ನು ಟೀಕಿಸುವ ಕೆಸಿಆರ್ ಅವರ ನಡೆಯಿಂದ ಧೃತಿಗೆಟ್ಟಿರುವ ಬಿಜೆಪಿ, ತಮ್ಮ ಕುಟುಂಬದ ವರ್ಚಸ್ಸಿಗೆ ಧಕ್ಕೆ ತರಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ನೂತನ ಲಿಕ್ಕರ್ ನೀತಿಯಲ್ಲಿ ಕಮಿಷನ್ ನ್ನು ಶೇ. 2.5 ರಿಂದ ಶೇ. 12ಕ್ಕೆ ಹೆಚ್ಚಿಸಲು ಮನೀಶ್ ಸಿಸೋಡಿಯಾ ಕೊಟ್ಯಾಂತರ ರೂ. ಲಂಚ ಪಡೆದಿದ್ದಾರೆ. ಈ ಸಂಬಂಧ ದೆಹಲಿಯ ಓಬೇರಾಯ್ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ದೆಹಲಿ ಅಬಕಾರಿ ಅಧಿಕಾರಿಗಳು, ಆಯುಕ್ತರು, ಮನೀಶ್ ಸಿಸೋಡಿಯಾ, ಲಿಕ್ಕರ್ ಮಾಫಿಯಾದಲ್ಲಿ ತೊಡಗಿರುವ ಜನರು ಹಾಗೂ ಕೆಲ ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು. ಇದರಲ್ಲಿ ಸಭೆಯಲ್ಲಿ ಕೆಸಿಆರ್ ಕುಟುಂಬದ ಸದಸ್ಯರು ಸಹ ಭಾಗವಹಿಸಿದ್ದರು ಎಂದು ಬಿಜೆಪಿ ಆರೋಪಿಸಿದೆ.
PublicNext
23/08/2022 07:52 am