ವರದಿ: ಸಂತೋಷ ಬಡಕಂಬಿ
ಅಥಣಿ: ಬಣಜವಾಡ ಕಾಲೇಜಿನ ಶಾಲಾ ವಾಹನದ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ವೈದ್ಯಕೀಯ ವೆಚ್ಚವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸಲಾಗುವುದು ಹಾಗೂ ಅಪಘಾತದಲ್ಲಿ ಮರಣ ಹೊಂದಿದ ಚಾಲಕನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 2 ಲಕ್ಷ ರೂ.ಗಳನ್ನು ವೈಯಕ್ತಿಕವಾಗಿ ನೀಡುವುದಾಗಿ ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಹೇಳಿದರು.
ಅವರು ಪಟ್ಟಣದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ ಹಾಗೂ ಮೃತ ಚಾಲಕ ರಘುನಾಥ ಅವತಾಡೆ ಮನೆಗೆ ಭೇಟಿ ನೀಡಿ ಮಾತನಾಡುತ್ತಾ ಅಪಘಾತ ನಡೆದಾಗ ಕಾರ್ಯನಿಮಿತ್ತ ಬೆಂಗಳೂರಿನಲ್ಲಿದ್ದೆ ಸುದ್ದಿ ತಿಳಿದು ಆಘಾತಗೊಂಡಿದ್ದೆ. ತಕ್ಷಣ ತಾಲೂಕಾ ಆಡಳಿತದೊಂದಿಗೆ ಸಂಪರ್ಕಿಸಿ ಅಗತ್ಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದೆ ಎಂದ ಅವರು ಮೃತ ಚಾಲಕ ತನ್ನ ಜೀವದ ಹಂಗು ತೊರೆದು ಧೈರ್ಯದಿಂದ ವಿದ್ಯಾರ್ಥಿಗಳ ಪ್ರಾಣ ಉಳಿಸಿದ ಮಹಾನ್ ವ್ಯಕ್ತಿ ಎಂದರು.
ಇತ್ತೀಚಿಗಷ್ಟೆ ಭೂ ಸೇನೆಯಿಂದ ನಿವೃತ್ತಿ ಹೊಂದಿದ್ದ ಮೃತ ರಘುನಾಥನಿಗೆ ಇಬ್ಬರು ಚಿಕ್ಕಮಕ್ಕಳಿದ್ದಾರೆ. ಅತೀ ಕಡಿಮೆ ಭೂಮಿ ಹೊಂದಿರುವ ಈ ಕುಟುಂಬದ ಅನುಕೂಲಕ್ಕಾಗಿ ಮಕ್ಕಳ ಶಿಕ್ಷಣಕ್ಕಾಗಿ 2 ಲಕ್ಷ ಹಣವನ್ನು ಮೃತ ಚಾಲಕನ ಪತ್ನಿ ಹಾಗೂ ಮಕ್ಕಳ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿ ಇಡುವುದಾಗಿ ಹೇಳಿದ ಅವರು ಅಪಘಾತ ನಡೆದ ದಿನ ಪಟ್ಟಣದ ಎಲ್ಲ ಖಾಸಗಿ ವೈದ್ಯರು, ತಾಲೂಕಾ ಆಡಳಿತ, ಪೊಲೀಸ್ ಇಲಾಖೆಯ ಅಧಿಕಾರಿಗಳು ಪರಿಹಾರ ಕಾರ್ಯದಲ್ಲಿ ಸಹಕರಿಸಿದ್ದಾರೆ ಎಂದರು.
PublicNext
22/08/2022 10:09 pm