ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆ ಸಂಘಪರಿವಾರದ ಕೈಗೊಂಬೆಯಾಗಿದೆ ಎಂದು ಸರಣಿ ಟ್ವೀಟ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್ ಕಿಡಿಕಾರಿದ್ದಾರೆ.
ಬಿಜೆಪಿ ಪಕ್ಷದ ಪುಂಡರ ಗೂಂಡಾಗಿರಿಗೆ ಅವಕಾಶ ನೀಡಿ, ಕೈಕಟ್ಟಿಕೊಂಡು ತಮಾಷೆ ನೋಡುವ ಪೊಲೀಸರ ಕರ್ತವ್ಯ ಲೋಪ ಖಂಡಿಸಿ ಈ ತಿಂಗಳ 26 ರಂದು ಕೊಡಗಿನ ಎಸ್.ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಬಿಜೆಪಿಯ ಗೂಂಡಾಗಿರಿಗೆ ಹೋರಾಟದ ಮೂಲಕವೇ ತಕ್ಕ ಉತ್ತರ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರ ಪೋಟೊವನ್ನು ಪಕ್ಷದ ಕಚೇರಿಯಲ್ಲಿಯೇ ಕಸದ ಬುಟ್ಟಿಗೆ ಎಸೆದಿರುವ ಬಿಜೆಪಿ ನಾಯಕರ ಹೃದಯದೊಳಗೆ ಗಾಂಧೀಜಿಯೂ, ಇಲ್ಲ ಅಂಬೇಡ್ಕರ್ ಅವರೂ ಇಲ್ಲ. ಅವರೊಳಗೆ ಇರುವುದು ನಾಥುರಾಮ್ ಗೋಡ್ಸೆ ಮಾತ್ರ. ಈ ಸತ್ಯವನ್ನು ಮೊದಲು ಒಪ್ಪಿಕೊಳ್ಳಿ. ಬಿ.ಎಸ್ ಯಡಿಯೂರಪ್ಪ ಅವರಿಗೆ 75 ವರ್ಷ ಆಯ್ತು ಎಂದು ಮುಖ್ಯಮಂತ್ರಿ ಸ್ಥಾನದಿಂದ ನಿರ್ದಯವಾಗಿ ಕೆಳಗಿಳಿಸಿದರು. ಅವರು ಕಣ್ಣೀರು ಹಾಕುತ್ತಾ ರಾಜೀನಾಮೆ ನೀಡಿದ್ದರು. ಈಗ ಮತ್ತೆ ಸಂಸದೀಯ ಮಂಡಳಿಗೆ ಆಯ್ಕೆ ಮಾಡಿದ್ದಾರೆ. ಈಗ ಅವರ ವಯಸ್ಸು ಕಡಿಮೆ ಆಯ್ತಾ? ಇದಕ್ಕೆ ಕಾರಣ ಅವರ ಮೇಲಿನ ಪ್ರೀತಿ ಅಲ್ಲ, ಸೋಲಿನ ಭಯ ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಅಷ್ಟೇ ಅಲ್ಲದೆ ಇತ್ತ ರಾಜ್ಯ ಸರ್ಕಾರ ವಿರುದ್ದ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಕೂಡ ಕಿಡಿಕಾರಿದ್ದಾರೆ. 'ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ನಡೆದ ದಾಳಿ ಖಂಡನೀಯ. ಸೈದ್ದಾಂತಿಕವಾಗಿ ಎದುರಿಸಲು ಸಾಧ್ಯವಿಲ್ಲದ ರಣಹೇಡಿಗಳು ದೈಹಿಕ ದಾಳಿಗೆ ಮುಂದಾಗುತ್ತಾರೆ. ವಿಪಕ್ಷ ನಾಯಕರುಗಳಿಗೇ ಭದ್ರತೆ ನೀಡದ ಅಸಮರ್ಥ ಸರ್ಕಾರದಿಂದ,ರಾಜ್ಯದ ರಕ್ಷಣೆ ಸಾಧ್ಯವೇ? ಕ್ರಿಯೆಗೆ ಪ್ರತಿಕ್ರಿಯೆ,ಯುಪಿ ಮಾದರಿಯ ಸಿಎಂ ಹೇಳಿಕೆಯಿಂದಲೇ ಪುಂಡ ಪೋಕರಿಗಳು ಬಾಲ ಬಿಚ್ಚಿದ್ದಾರೆ ಎಂದು ಬಿಕೆ ಹರಿಪ್ರಸಾದ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
PublicNext
19/08/2022 12:31 pm