ಬೆಳಗಾವಿ: ಬೆಳಗಾವಿ ದಕ್ಷಿಣ ಕ್ಷೇತ್ರ ಮಾತ್ರ ನಮ್ಮ ಗುರಿಯಲ್ಲ. ಸವದತ್ತಿ, ರಾಯಬಾಗ, ಹಾರೂಗೇರಿ ಎಲ್ಲ ಕಡೆಗಳಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ದೃಷ್ಟಿಯಿಂದ ಸಭೆ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಚಿಂತನಾ ಶಿಬಿರದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬೆಳಗಾವಿಯ ದಕ್ಷಿಣ ಮತಕ್ಷೇತ್ರದಲ್ಲಿ ಅಭ್ಯರ್ಥಿ ಯಾರೆಂಬುದು ಈಗ ಪ್ರಸ್ತುತವಲ್ಲ. ಮೊದಲು ಪಕ್ಷ ಸಂಘಟನೆ ಬಲಪಡಿಸಬೇಕಿದೆ. ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ನಮ್ಮ ಪ್ರಯತ್ನ ನಡೆಸಿದ್ದೇವೆ ಎಂದರು.
ಕೇಂದ್ರ, ರಾಜ್ಯ ಸರ್ಕಾರಗಳ ವೈಫಲ್ಯದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಜಿಲ್ಲೆಯ 18 ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆ ಮಾಡಲಾಗುತ್ತಿದೆ. ದಕ್ಷಿಣ ಕ್ಷೇತ್ರದ ಮತ ಹೆಚ್ಚು ಮಾಡಲು ಪ್ರಯತ್ನ ನಡೆಸಲಾಗುತ್ತಿದೆ. ಅಡಿಪಾಯ ಗಟ್ಟಿಯಿದ್ದರೆ ಮಾತ್ರ ಅಭ್ಯರ್ಥಿ ಗೆಲುವು ಸಾಧ್ಯ ಎಂದರು.
ಶಾಸಕ ಜಮೀರ್ ಅಹಮ್ಮದ್ ಖಾನ್ ನೋಟೀಸ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮಗೆ ಸಂಬಂಧಪಟ್ಟ ವಿಚಾರ ಇದಲ್ಲ. ರಾಜಕೀಯ ಅಂದರೆ ಗೊಂದಲ ಇರಲೇಬೇಕು, ಇದ್ದೇ ಇರುತ್ತದೆ. ಪಕ್ಷದಲ್ಲಿ ನಮ್ಮ ವಿಚಾರ ಪ್ರಸ್ತಾಪ ಮಾಡಲು ಎಲ್ಲರೂ ಸ್ವತಂತ್ರರು. ಸಿಎಂ ಯಾರು ಎಂದು ಈಗ ಹೇಳುವುದು ಕಷ್ಟ ಎಂದರು.
ಪಕ್ಷದಲ್ಲಿ ವ್ಯಕ್ತಿಗತ ವಿಷಯ ಬರುವುದಿಲ್ಲ, ವ್ಯಕ್ತಿ ಪೂಜೆ ಬೇಡ ಪಕ್ಷ ಪೂಜೆ ಮಾಡಿ ಎಂದು ನಾವು ಹೇಳುತ್ತೇವೆ. ಸಿದ್ದರಾಮೋತ್ಸವದಿಂದ ಪಕ್ಷಕ್ಕೆ ಶಕ್ತಿ ಬರಲಿದೆ ಎಂದರು.
PublicNext
24/07/2022 07:43 pm