ದಾವಣಗೆರೆ: ಅಗತ್ಯ ವಸ್ತುಗಳ ಮೇಲೆ ಜಿಎಸ್ ಟಿ ಹಾಗೂ ತೆರಿಗೆ ವಿಧಿಸಿದ ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಮಹಿಳಾ ಕಾಂಗ್ರೆಸ್ ಘಟಕದವರು ನಗರದಲ್ಲಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.
ನಗರದ ರಿಂಗ್ ರಸ್ತೆಯ ಕ್ಲಾಕ್ ಟವರ್ ನಲ್ಲಿ ಪ್ರತಿಭಟನೆ ನಡೆಸಿದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಸಿಲಿಂಡರ್ ತಲೆ ಮೇಲೆ ಹೊತ್ತು, ಕಟ್ಟಿಗೆ ಒಲೆ ಇಟ್ಟು ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಬಿಜೆಪಿ ವಿರುದ್ಧ ಘೋಷಣೆ ಹಾಕಿದರು. ಈ ವೇಳೆ ಸಿಲಿಂಡರ್ ಹೊತ್ತು ಪ್ರತಿಭಟಿಸುವ ಮೂಲಕ ಪುಷ್ಪಾ ಅಮರನಾಥ್ ಗಮನ ಸೆಳೆದರು.
ಹಾಲು, ಮೊಸರು, ಅಕ್ಕಿ, ಗೋಧಿ ಸೇರಿದಂತೆ ಅಡುಗೆ ವಸ್ತುಗಳ ಮೇಲೆ ಶೇಕಡಾ 5ರಷ್ಟು ಜಿ. ಎಸ್. ಟಿ. ವಿಧಿಸಿರುವುದು ಸರಿಯಲ್ಲ. ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಮಹಿಳೆಯರು ಬಳಸುವ ನ್ಯಾಪ್ಕಿನ್, ಬ್ಯಾಂಕ್ ಚೆಕ್ ಗಳು ಸೇರಿದಂತೆ ಇತರೆ ವಸ್ತುಗಳ ಮೇಲೆ ಜಿಎಸ್ ಟಿ ವಿಧಿಸುವ ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ಮಹಿಳೆಯರ ಮೇಲೆ ಗದಾ ಪ್ರಹಾರ ನಡೆಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ವೇಳೆ ಮಾತನಾಡಿದ ಪುಷ್ಪಾ ಅಮರನಾಥ್, ಇಂಥ ಭ್ರಷ್ಟ ಸರ್ಕಾರ ಎಂದಿಗೂ ನೋಡಿಲ್ಲ. ಅಡುಗೆ ಅನಿಲ ಸಾವಿರ ರೂಪಾಯಿ ದಾಟಿದರೂ ಬಿಜೆಪಿ ನಾಯಕಿಯರು ಯಾಕೆ ಮೌನವಾಗಿದ್ದಾರೆ ಎಂಬುದೇ ಅರ್ಥ ಆಗುತ್ತಿಲ್ಲ. ಮಹಿಳೆಯರು ಇಂಥ ಮಹಿಳಾ ವಿರೋಧಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.
PublicNext
19/07/2022 07:11 pm