ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಫೋಟಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವುದು ಸಾಮಾನ್ಯ, ಆದರೆ ಅದಕ್ಕೆ ಅಪವಾದ ಎಂಬಂತೆ ಮೂರು ದಿನಗಳ ಡಾರ್ಜಿಲಿಂಗ್ ಭೇಟಿಗಾಗಿ ಆಗಮಿಸಿರುವ ಸಂದರ್ಭದಲ್ಲಿ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರಿಗೆ ಸ್ವತಃ ಪಾನಿ ಪುರಿಯನ್ನು ವಿತರಿಸುವ ಮೂಲಕ ಸುದ್ದಿಯಾಗಿದ್ದಾರೆ.
ಗೂರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತದ(ಜಿಟಿಎ) ಹೊಸದಾಗಿ ಚುನಾಯಿತರಾದ 45 ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಮಮತಾ ಬ್ಯಾನರ್ಜಿ 3 ದಿನಗಳ ಡಾರ್ಜಿಲಿಂಗ್ ಭೇಟಿಯಲ್ಲಿದ್ದಾರೆ. ಅವರ ಪ್ರವಾಸ ಸೋಮವಾರ ಪ್ರಾರಂಭವಾಗಿದ್ದು, ಗುರುವಾರ ಕೋಲ್ಕತ್ತಾಗೆ ಮರಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಮತಾ ಇಂದು ಡಾರ್ಜಿಲಿಂಗ್ ಚೌರಸ್ತಾದಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಿಚ್ಮಂಡ್ ಹಿಲ್ ಪ್ರದೇಶದಿಂದ ಡಾರ್ಜಿಲಿಂಗ್ ಮೃಗಾಲಯದತ್ತ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಸಾಲು, ಸಾಲು ಪಾನಿ ಪುರಿ ಅಂಗಡಿಗಳಿರುವುದನ್ನು ಗಮನಿಸಿದ ಸಿಎಂ ಮಮತಾ ಬ್ಯಾನರ್ಜಿ, ನಂತರ ವಾಹನದಿಂದ ಇಳಿದು ಅಲ್ಲಿ ನೆರೆದಿದ್ದ ಮಕ್ಕಳು, ಮಹಿಳೆಯರು, ಹಿರಿಯರಿಗೆ ತಾವೇ ಖುದ್ದು ಪಾನಿ ಪುರಿ ವಿತರಿಸಿರುವುದಾಗಿ ವರದಿ ವಿವರಿಸಿದೆ.
PublicNext
12/07/2022 08:15 pm