ಮುಂಬೈ: ಶಿವಸೇನೆಯಲ್ಲಿ ಬಂಡಾಯ ಎಬ್ಬಿಸಿ ಮಹಾರಾಷ್ಟ್ರದ 19ನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಏಕನಾಥ್ ಶಿಂಧೆ ನಟೋರಿಯಸ್ ಕ್ರಿಮಿನಲ್ ಹಿಸ್ಟರಿ ಹೊಂದಿದ್ದಾರೆ. ಸರ್ಕಾರಿ ಕಚೇರಿಗಳಿಗೆ ಬೆಂಕಿ ಇಟ್ಟು ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಉಂಟು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಏಕನಾಥ ಶಿಂಧೆ ವಿರುದ್ಧ 18 ಕ್ರಿಮಿನಲ್ ಕೇಸ್‌ಗಳು ಬುಕ್ ಆಗಿವೆ.
ಏಕನಾಥ್ ಶಿಂಧೆ ಹುಟ್ಟಿದ್ದು 1964ರ ಫೆಬ್ರವರಿ 9 ರಂದು, ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ. ಅವರು ಶಿಕ್ಷಣ ಪಡೆಯಲು ಥಾಣೆಗೆ ಬಂದಿದ್ದರು. ಆದರೆ 11ನೇ ಕ್ಲಾಸ್‌ವರೆಗೆ ಕಲಿತ ಏಕನಾಥ್ ಶಿಂಧೆ ಆ ಬಳಿಕ ಸೆಕೆಂಡ್ ಹ್ಯಾಂಡ್ ಆಟೋ ತೆಗೆದುಕೊಂಡು ಥಾಣೆಯಲ್ಲಿ ಹೊಟ್ಟೆಪಾಡಿನ ಕೆಲಸ ಆರಂಭಿಸಿದ್ದರು. ಈ ಅವಧಿಯಲ್ಲಿ ತಮ್ಮ ಆಟೋದಲ್ಲಿ ಹೆಚ್ಚಾಗಿ ಓಡಾಡುತ್ತಿದ್ದ ಶಿವಸೇನೆಯ ಬಲಾಢ್ಯ ನಾಯಕ ಅನಂದ್ ದಿಘೆ ಅವರ ಪರಿಚಯವಾಗಿತ್ತು. 18ನೇ ವರ್ಷದಲ್ಲಿ ರಾಜಕೀಯಕ್ಕೆ ಇಳಿದ, ಏಕನಾಥ್ ಶಿಂಧೆ, ಸಾಮಾನ್ಯ ಶಿವಸೇನೆ ಕಾರ್ಯಕರ್ತನಾಗಿ ರಾಜಕಾರಣಕ್ಕೆ ಇಳಿದಿದ್ದರು.
ಅಂದಾಜು 15 ವರ್ಷಗಳ ಕಾಲ ಶಿವಸೇನೆಯ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದ ಏಕನಾಥ್ ಶಿಂಧೆ, 1997ರಲ್ಲಿ ಚುನಾವಣಾ ರಾಜಕೀಯಕ್ಕೆ ಇಳಿದರು. 1997ರಲ್ಲಿ ಆನಂದ್ ದಿಘೆ ಥಾಣೆ ಮಹಾನಗರ ಪಾಲಿಕೆಯ ಚುನಾವಣೆಯ ಕೌನ್ಸಿಲರ್ ಟಿಕೆಟ್ ನೀಡಿದ್ದರು. ಎದುರಿಸಿದ ಮೊದಲ ಚುನಾವಣೆಯಲ್ಲಿಯೇ ಏಕನಾಥ್ ಶಿಂಧೆ ಗೆಲುವಿನ ಖುಷಿ ಕಂಡಿದ್ದರು. 2011ರಲ್ಲಿ ಥಾಣೆ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕನಾಗುವವರೆಗೆ ಬೆಳೆದರು. ಅದಾದ ಬಳಿಕ, 2002ರಲ್ಲಿ ಮತ್ತೊಮ್ಮೆ ಕೌನ್ಸಿಲರ್ ಆಗಿ 2ನೇ ಬಾರಿಗೆ ಆಯ್ಕೆಯಾದರು.
2004 ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ, ಶಿಂಧೆ ಅವರಿಗೆ ಥಾಣೆ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಿತು. ಇಲ್ಲಿಯೂ ಶಿಂಧೆ ಜಯ ಕಂಡಿದ್ದರು. ಅವರು ಕಾಂಗ್ರೆಸ್‌ನ ಮನೋಜ್ ಶಿಂಧೆ ಅವರನ್ನು 37 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು. ಇದಾದ ನಂತರ 2009, 2014 ಮತ್ತು 2019ರಲ್ಲಿ ಶಿಂಧೆ ಅವರು ಥಾಣೆ ಜಿಲ್ಲೆಯ ಕೊಪ್ರಿ ಪಚ್ಪಖಾಡಿ ಕ್ಷೇತ್ರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ದೇವೇಂದ್ರ ಫಡ್ನವೀಸ್ ಸರ್ಕಾರದಲ್ಲಿ ಶಿಂಧೆ ಅವರು ರಾಜ್ಯದ ಲೋಕೋಪಯೋಗಿ ಸಚಿವರಾಗಿದ್ದರು.
ಮಹಾರಾಷ್ಟ್ರದ ನೂತನ ಸಿಎಂ ಏಕನಾಥ್ ಶಿಂಧೆ ವಿರುದ್ಧ ಬರೋಬ್ಬರಿ 18 ಕ್ರಿಮಿನಲ್ ಕೇಸುಗಳು ದಾಖಲಾಗಿವೆ. ಆದ್ರೆ ಒಂದರಲ್ಲೂ ಅವರು ಶಿಕ್ಷೆಗೆ ಗುರಿಯಾಗಿಲ್ಲ. ಒಂದು ಕೇಸಿನಲ್ಲೂ ಅವರು ಮೇಲ್ಮನವಿ ಹೋಗಿಲ್ಲ. ಸ್ವತಃ ಏಕನಾಥ ಶಿಂಧೆ ಚುನಾವಣೆ ವೇಳೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಶಿಂಧೆಯ ಕ್ರಿಮಿನಲ್ ಕೇಸ್‌ಗಳ ಸಂಕ್ಷಿಪ್ತ ವಿವರ ಉಲ್ಲೇಖವಾಗಿದೆ. ಬಹುತೇಕ ಕೇಸುಗಳು ಸರ್ಕಾರಿ ಅಧಿಕಾರಿಗಳಿಗೆ ತೊಂದರೆ ಕೊಟ್ಟಿರುವುದು, ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟವುಂಟು ಮಾಡಿರುವುದು. ಈ ಅಫಿಡವಿಟ್ ಪ್ರಕಾರ, ಶಿಂಧೆ ಒಟ್ಟು 11 ಕೋಟಿ 56 ಲಕ್ಷಕ್ಕೂ ಹೆಚ್ಚು ಆಸ್ತಿ ಹೊಂದಿದ್ದಾರೆ. ಇದರಲ್ಲಿ 2.10 ಕೋಟಿಗೂ ಹೆಚ್ಚು ಚರಾಸ್ತಿ ಹಾಗೂ 9.45 ಕೋಟಿಗೂ ಹೆಚ್ಚು ಸ್ಥಿರಾಸ್ತಿ ಘೋಷಿಸಲಾಗಿದೆ.
ಚುನಾವಣಾ ಅಫಿಡವಿಟ್ ಪ್ರಕಾರ ಶಿಂಧೆ ಬಳಿ ಒಟ್ಟು ಆರು ಕಾರುಗಳಿವೆ. ಈ ಪೈಕಿ ಮೂರು ಶಿಂಧೆ ಹೆಸರಿನಲ್ಲಿ ಹಾಗೂ ಮೂರು ಪತ್ನಿಯ ಹೆಸರಿನಲ್ಲಿವೆ. ಶಿಂಧೆ ಅವರ ಪತ್ನಿಯ ಹೆಸರಿನ ಟೆಂಪೋ ಕೂಡ ಇದೆ. ಶಿಂಧೆ ಅವರ ಆರು ಕಾರುಗಳ ಸಂಗ್ರಹದಲ್ಲಿ ಎರಡು ಇನ್ನೋವಾ, ಎರಡು ಸ್ಕಾರ್ಪಿಯೊ, ಒಂದು ಬೊಲೆರೊ ಮತ್ತು ಒಂದು ಮಹೀಂದ್ರ ಅರ್ಮಡಾ ಹೊಂದಿದ್ದಾರೆ. ಶಿಂಧೆ ಬಳಿ ಪಿಸ್ತೂಲ್ ಮತ್ತು ರಿವಾಲ್ವರ್ ಕೂಡ ಇದೆ.
PublicNext
30/06/2022 08:02 pm