ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಬಿಜೆಪಿ ಬಾಲಂಗೋಚಿ, ಆಪರೇಶನ್ ಕಮಲಯ್ಯ': ಸಿದ್ದರಾಮಯ್ಯ ಮೇಲೆ ಕುಮಾರಸ್ವಾಮಿ ಗರಂ

ಬೆಂಗಳೂರು: ಬಿಜೆಪಿ ಸರಕಾರದ ಕಾರಣಪುರುಷ, ಆಹಿಂದ ಆದಿಪುರುಷ, ಕಾಂಗ್ರೆಸ್ ಮುಗಿಸಲು ಹೊರಟ ಸಿದ್ದಹಸ್ತ ಮಹಾಶಯ. ಏನಯ್ಯಾ ನಿಮ್ಮ ರಾಜಕೀಯ? ಮುಸ್ಲಿಮರ ರಾಜಕೀಯ ನರಮೇಧಕ್ಕೆ ಇನ್ನೊಂದು ವಿನಾಶಕಾರಿ ಅಧ್ಯಾಯ ಆರಂಭಿಸಿದ್ದೀರಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಹೆಚ್.ಡಿ.ಕುಮಾರಸ್ವಾಮಿ, ಭಾಷಣ ಒಂದು, ರಾಜಕಾರಣ ಇನ್ನೊಂದು!!’, ಇದಯ್ಶಾ ಕಿಲಾಡಿರಾಮಯ್ಯನ ರಾಜನೀತಿ ಮತ್ತು ರಣನೀತಿ. ಐದು ವರ್ಷಗಳ ನಿಮ್ಮ ನೇತೃತ್ವದ ಕಾಂಗ್ರೆಸ್ ಸರಕಾರ ಬರಲು ಕಾರಣರಾದ ಅಲ್ಪಸಂಖ್ಯಾತರನ್ನೇ ಅಯ್ಯೋ ಎನ್ನುವಂತೆ ಮಾಡುತ್ತಿದೀರಲ್ಲ..? ಇದು ನ್ಯಾಯವೇ? ಎಂದು ಟ್ವೀಟ್ ಮಾಡಿದ್ದಾರೆ.ಸೋಲು ಖಚಿತ ಎಂದು ಗೊತ್ತಿದ್ದರೂ ಮನ್ಸೂರ್ ಖಾನ್ ಅವರನ್ನು ಬಲಿಪೀಠದ ಮುಂದೆ ನಿಲ್ಲಿಸಿದ್ದಿರಿ. ಏನಿದರ ಹಕೀಕತ್ತು? ಮುಸ್ಲಿಂ ನಾಯಕರನ್ನು ಸಾಲು ಸಾಲಾಗಿ ರಾಜಕೀಯ ಗಿಲೋಟಿನ್ ಯಂತ್ರಕ್ಕೆ ತಳ್ಳುತ್ತಿರುವ ನಿಮ್ಮ ‘ಮುಸ್ಲಿಂ ಮೂಲೋತ್ಪಾಟನಾ ಜಕೀಯ’ಕ್ಕೆ ರಾಜ್ಯಸಭೆ ಚುನಾವಣೆಯನ್ನೂ ಬಳಸಿಕೊಳ್ಳುತ್ತಿದ್ದೀರಲ್ಲ? ಇದೆಂಥಾ ರಾಜಕೀಯವಯ್ಯಾ?

ಅಲ್ಪಸಂಖ್ಯಾತರ ಬಗ್ಗೆ ಅಷ್ಟು ಮಮಕಾರ ಇದ್ದಿದ್ದರೆ ಮನ್ಸೂರ್ ಖಾನ್ ಅವರನ್ನೇ ಮೊದಲ ಅಭ್ಯರ್ಥಿ ಮಾಡಬೇಕಿತ್ತು. ಮಾಡಲಿಲ್ಲ ಯಾಕೆ? ನಿಮಗೆ ಜೈರಾಂ ರಮೇಶ್ ಹೆಚ್ಚೋ ಅಥವಾ ಮನ್ಸೂರ್ ಖಾನ್ ಹೆಚ್ಚೋ? ಇಲ್ಲವೇ ಬಿಜೆಪಿಯ 3ನೇ ಅಭ್ಯರ್ಥಿ ಹೆಚ್ಚೋ?

ಇಕ್ಬಾಲ್ ಅಹಮದ್ ಸರಡಗಿ ಆಯಿತು. ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್ ಆಯಿತು. ರೋಷನ್ ಬೇಗ್ ಕಥೆಯನ್ನು ಮುಗಿಸಿದಿರಿ. ತನ್ವೀರ್ ಸೇಠ್ ನಿಮ್ಮ ಹಿಟ್ ಲಿಸ್ಟಿನಲ್ಲಿ ಇದ್ದಾರೆ. ಸತ್ಯ ಹೇಳಿದ ಸಲೀಂರನ್ನು ಸಲೀಸಾಗಿ ಸೈಡಿಗಟ್ಟಿದಿರಿ. ಒಂದೇ ಕಲ್ಲಿನಲ್ಲಿ ಅನೇಕ ಹಕ್ಕಿಗಳನ್ನು ಹೊಡೆಯೋದು ಅಂದರೆ ಇದೇನಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ರಾಮನ ಹೆಸರು, ರಾವಣ ರಾಜಕೀಯ! ನಿಮಗೆ ನೀವೇ ಸಾಟಿ. ಜಾತ್ಯತೀತತೆಯ ಸೋಗು ಹಾಕಿಕೊಂಡು ಪೋಸು ಕೊಡುವ ಆಸಾಮಿ, ಜಾತಿಗೊಂದು ಸಮಾವೇಶ ನಡೆಸಿಕೊಂಡು ಅಲ್ಪಸಂಖ್ಯಾತ ವ್ಯಕ್ತಿಯನ್ನು 2ನೇ ಅಭ್ಯರ್ಥಿ ಮಾಡಿದ ಒಳಗುಟ್ಟು ಏನು? ಆಪರೇಶನ್ ಕಮಲದ ಅಮಲು ಇನ್ನೂ ಇಳಿದಿಲ್ಲವೆ? ಬಿಜೆಪಿ ಬಾಲಂಗೋಚಿ, ಬಿಜೆಪಿ ಬಿ ಟೀಮಿನ ಕ್ಯಾಪ್ಟನ್, ಆಪರೇಶನ್ ಕಮಲಯ್ಶ, ಸಿದ್ಧಸೂತ್ರಧಾರ, ಢೋಂಗಿ ಜಾತ್ಯತೀತ, ಆಶ್ರಯ ಕೊಟ್ಟ ಪಕ್ಷದ ಕತ್ತು ಸೀಳಲು ಹೊರಟ ಕೈಚಳಕದ ಕಲಿ. ನಿಮ್ಮ ಅಸಲಿಯೆತ್ತು ರಾಜ್ಯಸಭೆ ಚುನಾವಣೆಯಲ್ಲೂ ನಡೆಯುತ್ತಾ? ಎಷ್ಟಾದರೂ ನೀವು ಆಪರೇಶನ್ ಕಮಲದ ಆಸಾಮಿ ಅಲ್ಲವೇ? ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ ಸಿದ್ದರಾಮಯ್ಯ ಮೇಲೆ ಪರೋಕ್ಷವಾಗಿ ಕಿಡಿ ಕಾರಿದ್ದಾರೆ.

Edited By : Nagaraj Tulugeri
PublicNext

PublicNext

01/06/2022 01:44 pm

Cinque Terre

26.53 K

Cinque Terre

8

ಸಂಬಂಧಿತ ಸುದ್ದಿ