ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಬಲೆಗೆ ಬಿದ್ದಿರುವ ದಿವ್ಯಾ ಹಾಗರಗಿಯ 'ಕಾಂಗ್ರೆಸ್' ನಂಟು ಬಗೆದಷ್ಟು ಆಳಕ್ಕೆ ಹೋಗುತ್ತಿದೆ. ತನಗೂ ಹಾಗೂ ಕಾಂಗ್ರೆಸ್ ಪಕ್ಷಕ್ಕೂ ಇರುವ ನಂಟನ್ನು ಸಿಐಡಿ ತನಿಖಾ ತಂಡದ ಎದುರು ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಹಿರಂಗ ಪಡಿಸಿದ್ದಾರೆ.
ಪುಣೆಯಲ್ಲಿ ದಿವ್ಯಾ ಹಾಗರಗಿಗೆ ಆಶ್ರಯ ನೀಡಿದ್ದ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ಸುರೇಶ ಕಾಟೇಗಾಂವ ಅವರನ್ನು ಬಂಧಿಸಲಾಗಿದೆ. ಸುರೇಶ ಕಾಟೇಗಾಂವ ಅವರ ಸಹೋದರಿ ಸುರೇಖಾ ಸ್ಥಳೀಯ ಕಾಂಗ್ರೆಸ್ ನಾಯಕಿಯಾಗಿದ್ದಾರೆ. ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕು ಪಂಚಾಯತ ಮಾಜಿ ಅಧ್ಯಕ್ಷೆಯಾಗಿರುವ ಸುರೇಖಾ ಈಗ ಸದಸ್ಯೆಯಾಗಿದ್ದಾರೆ. ಸುರೇಶ್‌ಗೆ ಅಫಜಲಪುರದಲ್ಲಿ ಮರಳು ಬ್ಲಾಕ್ ಟೆಂಡರ್ ಪಡೆಯಲು ದಿವ್ಯಾ ಹಾಗರಗಿ ಸಹಾಯ ಮಾಡಿದ್ದರು ಎಂಬ ಆರೋಪವಿದೆ.
ಪಿಎಸ್ಐ ಅಕ್ರಮ ಬಯಲಾಗುತ್ತಿದ್ದಂತೆಯೇ ದಿವ್ಯಾ, ಏಪ್ರಿಲ್ 13ರಂದು ಕಲಬುರಗಿಯಿಂದ ಗುಜರಾತಿನ ಕಾಳಿಕಾ ಮಂದಿರಕ್ಕೆ ಖಾಸಗಿ ವಾಹನದಲ್ಲಿ ಪರಾರಿಯಾಗಿದ್ದರು. ಗುಜರಾತಿನಲ್ಲಿ 4 ದಿನ ತಲೆಮರೆಸಿಕೊಂಡಿದ್ದ ದಿವ್ಯಾ, ಅಲ್ಲಿಂದ ಗುಜರಾತಿನ ಅಂಬಾಜಿ ಮಂದಿರಕ್ಕೆ ತೆರಳಿ 3ರಿಂದ 4 ದಿನ ವಾಸ್ತವ್ಯ ಹೂಡಿದ್ದರು. ಅಲ್ಲಿಂದ ಪುಣೆಗೆ ತೆರಳಿ ಕಾಳಿದಾಸ್ಗೆ ಸೇರಿದ್ದ ಅಪಾರ್ಟ್ಮೆಂಟ್ನಲ್ಲಿ 5 ದಿನ ವಾಸ್ತವ್ಯ ಹೂಡಿದ್ದರು.
ಕಾಳಿದಾಸ, ಸುರೇಶ್ ಅವರ ಕಂಪನಿಯ ಉದ್ಯೋಗಿ. ಕಾಳಿದಾಸ ಅಪಾರ್ಟ್ಮೆಂಟ್ಗೆ ತೆರಳಿಯೇ ಸಿಐಡಿ ಅಧಿಕಾರಿಗಳು ದಿವ್ಯಾರನ್ನು ಬಂಧಿಸಿ, ರಾಜ್ಯಕ್ಕೆ ಕರೆತಂದಿದ್ದಾರೆ.
PublicNext
02/05/2022 08:00 am