ನವದೆಹಲಿ: ದೇಶದಲ್ಲಿ ದ್ವೇಷದ ರಾಜಕೀಯ ತೊಲಗಬೇಕು ಎಂದು ನೂರಕ್ಕೂ ಅಧಿಕ ಮಾಜಿ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಮನವಿಯೊಂದನ್ನು ಮಾಡಿಕೊಂಡಿದ್ದಾರೆ.
ಹೌದು. ದೆಹಲಿಯ ಮಾಜಿ ಲೆ.ಗ. ನಜೀರ್ ಜಂಗ್, ಮಾಜಿ ರಾಷ್ಟ್ರೀಯ ಭದ್ರತಾ ಸಲಹಾಗಾರ ಶಿವಶಂಕರ್ ಮೆನನ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್, ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪ್ರಧಾನ ಕಾರ್ಯದರ್ಶಿ ಟಿ.ಕೆ.ಎ. ನಾಯರ್ ಸೇರಿದಂತೆ ಸುಮಾರು 108 ಮಾಜಿ ಅಧಿಕಾರಿಗಳ ಸಹಿ ಇರುವ ಪತ್ರದ ಮೂಲಕ ಪ್ರಧಾನಿಗೆ ಮನವಿ ಮಾಡಿಕೊಳ್ಳಲಾಗಿದೆ.
ದೇಶ ದ್ವೇಷ ರಾಜಕಾರಣಕ್ಕೆ ಸಾಕ್ಷಿ ಆಗುತ್ತಿದೆ. ಮಾಜಿ ನಾಗರಿಕ ಸೇವಾ ಅಧಿಕಾರಿಗಳಾಗಿರುವ ನಾವು ಇಂಥ ಸಂದರ್ಭದಲ್ಲಿ ನಮ್ಮ ಅನಿಸಿಕೆ ತಿಳಿಸುವುದು ಸೂಕ್ತ ಹಾಗೂ ಅಗತ್ಯ ಅನಿಸುತ್ತಿದೆ. ಬಿಜೆಪಿ ಆಡಳಿತ ಇರುವ ಕರ್ನಾಟಕ, ಉತ್ತರ ಪ್ರದೇಶ, ಅಸ್ಸಾಂ, ಗುಜರಾತ್, ಹರಿಯಾಣ, ಮಧ್ಯಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಅಲ್ಪಸಂಖ್ಯಾತರ ಮೇಲೆ, ಅದರಲ್ಲೂ ಮುಸ್ಲಿಮರ ಮೇಲೆ ದ್ವೇಷ ಸಾಧಿಸಲಾಗುತ್ತಿದೆ. ತಾವು ಮಧ್ಯಪ್ರವೇಶಿಸಿ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಮಾತನ್ನು ಉಳಿಸಿಕೊಳ್ಳಬೇಕು ಎಂದು ವಿನಂತಿಸಿಕೊಂಡಿದ್ದಾರೆ.
PublicNext
27/04/2022 07:58 am