ಚೆನ್ನೈ: ತಮಿಳು ನಾಡಿನ ವಿಶ್ವವಿದ್ಯಾಲಯಗಳಿಗೆ ರಾಜ್ಯಪಾಲರ ಹೊರತಾಗಿ ಸರ್ಕಾರದಿಂದಲೇ ನೇರವಾಗಿ ಉಪಕುಲಪತಿಗಳನ್ನು ನೇಮಕಾತಿ ಮಾಡುವ ಮಸೂದೆಗೆ ಅನುಮೋದನೆ ದೊರೆತಿದೆ. ಈ ಮೂಲಕ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸಿದಂತಾಗಿದೆ.
ಆರಂಭದಲ್ಲಿ ಬಿಜೆಪಿ ಶಾಸಕರು ಈ ಮಸೂದೆಯನ್ನು ವಿರೋಧಿಸಿದ್ದರು. ಪ್ರಮುಖ ಪ್ರತಿಪಕ್ಷವಾದ ಎಐಎಡಿಎಂಕೆ, ಕಾಂಗ್ರೆಸ್ ಶಾಸಕಾಂಗ ಪಕ್ಷ ನಾಯಕ ಕೆ. ಸೆಲ್ವಪೆರುಂತಗೈ ಅವರು ದಿವಂಗತ ಜಯಲಲಿತಾ ಅವರ ಬಗ್ಗೆ ನೀಡಿರುವ ಹೇಳಿಕೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮಸೂದೆ ಮಂಡನೆಗೆ ಮುನ್ನ ಸದನ ಬಿಟ್ಟು ಹೊರನಡೆದರು.
ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮುಡಿ ಅವರು ತಮಿಳುನಾಡು ವಿಶ್ವವಿದ್ಯಾಲಯಗಳ ಕಾನೂನುಗಳಿಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಮಂಡಿಸಿದರು. ಈ ಮಸೂದೆಯಲ್ಲಿ ರಾಜ್ಯ ಸರ್ಕಾರವು ವಿಶ್ವವಿದ್ಯಾಲಯಗಳಿಗೆ ಉಪ ಕುಲಪತಿಗಳನ್ನು ನೇಮಕ ಮಾಡಲು ಅವಕಾಶ ಮಾಡಿಕೊಟ್ಟಿದೆ. ಮಸೂದೆ ಮಂಡನೆಗೂ ಮುನ್ನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಸರ್ಕಾರದ ನಿರ್ಧಾರವನ್ನು ಬೆಂಬಲಿಸುವಂತೆ ಸದನ ಸದಸ್ಯರಲ್ಲಿ ಮನವಿ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತ್‌ನಲ್ಲಿಯೂ ಸಹ ಉಪಕುಲಪತಿಗಳನ್ನು ರಾಜ್ಯಪಾಲರು ನೇಮಿಸದೆ ರಾಜ್ಯ ಸರ್ಕಾರ ನೇಮಿಸುತ್ತಿದೆ ಎಂದರು.
PublicNext
25/04/2022 04:42 pm