ದೊಡ್ಡಬಳ್ಳಾಪುರ: ಆಂಧ್ರ ಪ್ರದೇಶ ಸರ್ಕಾರದಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಉಷಾ ಶ್ರೀಚರಣ್ ಅವರು ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕು ಕುರುಬರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳು ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಂಧ್ರಪ್ರದೇಶ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಷಾ ಶ್ರೀಚರಣ್ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದ ಕಾರ್ಯವೈಖರಿ, ಸಾಧನೆ, ಜಾರಿ ಮಾಡಿರುವ ಯೋಜನೆಗಳು ಹಾಗೂ ಜನರ ಸಮಸ್ಯೆಗೆ ಸ್ಪಂದಿಸುವ ಜಗನ್ ಅವರ ಶೈಲಿಯನ್ನು ಶ್ಲಾಘಿಸಿದರು.
ಕರ್ನಾಟಕ ರಾಜ್ಯದಲ್ಲೂ ವೈಎಸ್ಆರ್ ಕಾಂಗ್ರೆಸ್ ಪಕ್ಷ ಕಟ್ಟುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲಿಯವರೆಗೆ ಪಕ್ಷ ಕಟ್ಟುವ ಬಗ್ಗೆ ಯೋಚಿಸಿರಲಿಲ್ಲ. ಗಡಿಭಾಗದಲ್ಲಿ ಸ್ಪರ್ಧಿಸುವ ಕುರಿತು ಮುಖ್ಯಮಂತ್ರಿ ಜೊತೆಗೆ ಚರ್ಚಿಸಲಾಗುವುದು. ಇದಲ್ಲದೆ ಇಲ್ಲಿನ ಜನರ ಅಭಿಪ್ರಾಯ ಖುದ್ದು ತಿಳಿಸಲಾಗುವುದು ಎಂದರು.
ಜಗನ್ ನೇತೃತ್ವದ ಮಂತ್ರಿಮಂಡಲದಲ್ಲಿ ಶೇ 75ರಷ್ಟು ಸಚಿವ ಸ್ಥಾನಗಳನ್ನು ಎಸ್‌ಸಿ/ಎಸ್‌ಟಿ ಹಾಗೂ ಹಿಂದುಳಿದವರಿಗೆ ಮೀಸಲಿಡಲಾಗಿದೆ. ಸ್ಥಳೀಯ ಸಂಸ್ಥೆಗಳಿಂದ ಹಿಡಿದು ವಿಧಾನಸಭೆವರೆಗೂ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ನೀಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಕುರುಬ ಸಮುದಾಯದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಅಗತ್ಯ ಬೆಂಬಲ, ಸಹಕಾರ ನೀಡಲಾಗುವುದು ಎಂದು ಹೇಳಿದರು.
ಕರ್ನಾಟಕದ ಮಗಳು ಆಂಧ್ರ ಸೊಸೆ, ಶಾಸಕಿಯಾದ ಮೊದಲ ಬಾರಿಗೆ ಸಚಿವೆ ಭಾಗ್ಯ:
ಉಷಾ ಅವರು ಮೂಲತಃ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಗ್ರಾಮದವರು. ಬೆಂಗಳೂರು ಉತ್ತರ ತಾಲೂಕಿನ ಸಿಂಗನಾಯಕನಹಳ್ಳಿಯ ಶ್ರೀಚರಣ್ ಅವರನ್ನು ವಿವಾಹವಾದರು. ಆ ಬಳಿಕ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಲ್ಯಾಣದುರ್ಗವನ್ನು ತಮ್ಮ ರಾಜಕೀಯ ಕಾರ್ಯ ಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡರು.
ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಮೊದಲ ಯತ್ನದಲ್ಲೇ ಶಾಸಕಿಯಾಗಿ ಬಳಿಕ ಸಚಿವೆಯಾಗಿ ಆಯ್ಕೆಯಾದರು. ತಮ್ಮ ಕ್ಷೇತ್ರದ ಜನರ ನಾಡಿಮಿಡಿತ ಅರಿತಿರುವ ಅವರನ್ನು ಅಲ್ಲಿನ ಜನ ಮನೆಮಗಳಾಗಿ ಸ್ವೀಕರಿಸಿದರು. ಅವರ ಅಪರಿಮಿತ ಸೇವೆ ಗುರುತಿಸಿ ಗೋವಾ ಸರ್ಕಾರ ಉಷಾಶ್ರೀಚರಣ್ ಅವರಿಗೆ ಚಾಣಕ್ಯ ಪ್ರಶಸ್ತಿ ನೀಡಿ ಗೌರವಿಸಿತು.
PublicNext
16/04/2022 06:19 pm