ದಾವಣಗೆರೆ: ಬಸವರಾಜ್ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಆಗಿರುವಾಗ ತಾವೇಕೆ ಮುಖ್ಯಮಂತ್ರಿ ಆಗಬಾರದು ಎಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ. ನಗರದ ಕುಂದುವಾಡ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ತಾವೂ ಸಹ ಮುಖ್ಯಮಂತ್ರಿ ಆಗಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದರು. ಬಸವರಾಜ್ ಬೊಮ್ಮಯಿ ಸಿಎಂ ಆಗಿದ್ದಾರೆ ಎಂದರೆ ನಾವು ಆಗೋದ್ರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಯಾವುದೇ ಸಮಸ್ಯೆ ಇಲ್ಲ. ಹೊಂದಾಣಿಕೆಯಿಂದಲೇ ಇದ್ದಾರೆ. ನಮ್ಮ ಪಕ್ಷದಲ್ಲಿ ಎಲ್ಲವೂ ಬಹಳ ಚೆನ್ನಾಗಿ ಇದೆ. ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಆಗಿ ಮಾಡಲಾಗುವುದು ಎಂದು ಪಕ್ಷದ ಮುಖಂಡರೇ ಹೇಳಿದ್ದಾರೆ. ಅವರು ಪಕ್ಷದಲ್ಲಿ ಹಿರಿಯರಿದ್ದಾರೆ. ಅವರು ಯಾಕೆ ಆಗಬಾರದು ಎಂದು ಪ್ರಶ್ನಿಸಿದರು.
ಹೈಕಮಾಂಡ್ ಯಾರು ಮುಖ್ಯಮಂತ್ರಿ ಎಂದು ಹೇಳೋತ್ತದೋ ಅವರನ್ನೇ ಮಾಡುತ್ತೇವೆ. ನಮ್ಮ ತಂದೆ ಶಾಮನೂರು ಶಿವಶಂಕರಪ್ಪ ಅವರಿಗೂ ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಇದೆ ಎಂದು ತಿಳಿಸಿದರು. ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್. ಈಶ್ವರಪ್ಪ ಗುರುವಾರವೇ ಬಾಕಿ ಉಳಿದ ಫೈಲ್ ಗಳಿಗೆ ಸಹಿ ಮಾಡಿ ರಾಜೀನಾಮೆ ಕೊಡ್ತಾರೆ ಎಂದು ವ್ಯಂಗ್ಯವಾಡಿದರು. ಅನ್ಯಾಯವಾಗಿ ಒಂದು ಜೀವ ಬಲಿ ಕೊಟ್ಟಿದ್ದಾರೆ. ಕಾಮಗಾರಿ ಮಾಡಿದ್ದಾರೆ ಎಂದರೆ ನಿರ್ದೇಶನ ಇಲ್ಲದೆ ಮಾಡ್ತಾರಾ. ಜಾತ್ರೆಗೆ ಅರ್ಜೆಂಟ್ ಇದೆ ಬೇಗ ಮಾಡಿ ಎಂದು ಹೇಳಿ, 40% ಕಮಿಷನ್ ಕೇಳಿದ್ರೆ ಅವ್ನು ಎಲ್ಲಿ ಹೋಗಬೇಕು ಅಲ್ವಾ ಎಂದು ಹೇಳಿದರು.
PublicNext
15/04/2022 01:16 pm