ನವದೆಹಲಿ: ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದು, ಇದು ಐದೂ ರಾಜ್ಯಗಳ 'ಕೈ' ನಾಯಕರ ತಲೆ ದಂಡಕ್ಕೆ ಕಾರಣವಾಗಿದೆ.
ಚುನಾವಣಾ ಸೋಲಿನ ಬಳಿಕ ಇಂದು ಸಭೆ ನಡೆಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಉತ್ತರಾಖಂಡ್, ಪಂಜಾಬ್, ಗೋವಾ, ಉತ್ತರ ಪ್ರದೇಶ ಮತ್ತು ಮಣಿಪುರ ಕಾಂಗ್ರೆಸ್ ಅಧ್ಯಕ್ಷರನ್ನು ವಜಾಗೊಳಿಸಿ ಆದೇಶಿಸಿದ್ದಾರೆ. ಅಲ್ಲದೇ ತಮ್ಮ ಈ ನಿರ್ಧಾರವನ್ನು ಮರು ಸಂಘಟನೆಯ ಮೊದಲ ಹೆಜ್ಜೆ ಎಂದು ಕೂಡ ಬಿಂಬಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್‌ನ ಹಿರಿಯ ನಾಯಕ ರಣದೀಪ್ ಸುರ್ಜೆವಾಲಾ, 'ಪಕ್ಷದ ಮರು ಸಂಘಟನೆ ದೃಷ್ಟಿಯಿಂದಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆ ನೀಡುವಂತೆ ಕೋರಿದ್ದಾರೆ' ಎಂದು ತಿಳಿಸಿದ್ದಾರೆ.
ಉತ್ತರಾಖಂಡ ಕಾಂಗ್ರೆಸ್ ಮುಖ್ಯಸ್ಥ ಗಣೇಶ್ ಗೋಡಿಯಾಲ್ ಮತ್ತು ಗೋವಾ ಕಾಂಗ್ರೆಸ್ ಮುಖ್ಯಸ್ಥ ಗಿರೀಶ್ ಚೋಡಂಕರ್ ಅವರು ಸೋಲಿನ ನೈತಿಕ ಹೊಣೆ ಹೊತ್ತು ಈಗಾಗಲೇ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು, ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಮತ್ತು ಮಣಿಪುರ ಕಾಂಗ್ರೆಸ್ ಮುಖ್ಯಸ್ಥ ನಾಮೀರಕ್ಪಂ ಲೋಕೇನ್ ಸಿಂಗ್ ಅವರಿಗೆ ರಾಜೀನಾಮೆ ಸಲ್ಲಿಸುವಂತೆ ತಿಳಿಸಲಾಗಿದೆ ಎಂದು ವರದಿಯಾಗಿದೆ.
PublicNext
15/03/2022 09:28 pm