ನವದೆಹಲಿ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ರಾಜ್ಯ ಗೆದ್ದುಕೊಂಡರೆ, ಆಮ್ ಆದ್ಮಿ ಪಾರ್ಟಿ ಹೊಸದಾಗಿ ಮತ್ತೊಂದು ರಾಜ್ಯಕ್ಕೆ ವಿಸ್ತರಣೆಯಾಗಿದೆ. ಆದರೆ ಕಾಂಗ್ರೆಸ್ ಇದ್ದ ಅಧಿಕಾರವನ್ನೂ ಕಳೆದುಕೊಂಡಿದ್ದು, ಇನ್ನುಳಿದ ರಾಜ್ಯಗಳಲ್ಲಿ ಹೇಳ ಹೆಸರಿಲ್ಲದಂತಾಯಿತು. ಈ ಹೀನಾಯ ಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕರು ನಾಳೆ (ಮಾ.13) ಸಭೆ ಸೇರಿ ಸೋಲಿನ ಕುರಿತು ಮಹತ್ವದ ಚರ್ಚೆ ನಡೆಸಲು ನಿರ್ಧರಿಸಿದೆ.
ಪಂಚ ರಾಜ್ಯಗಳ ಸೋಲಿನ ಹೊಣೆ ಹೊತ್ತು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ. ನಾಳೆ ನಡೆಯಲಿರುವ ಸಿಡಬ್ಲ್ಯೂಸಿ ಸಭೆಯಲ್ಲಿ ಏನು ತೀರ್ಮಾನವಾಗುತ್ತದೆ ಎಂದು ಕಾದು ನೋಡಬೇಕಾಗಿದೆ.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿರುವುದು ಇದು ಮೊದಲೇನಲ್ಲ. ಅವರ ರಾಜೀನಾಮೆ ಪ್ರಸ್ತಾವಗಳನ್ನು ಈ ಹಿಂದೆ ಸಭೆಗಳಲ್ಲಿ ತಿರಸ್ಕರಿಸಲಾಗುತ್ತಿದ್ದು, ಅವರ ಅಧಿಕಾರವನ್ನೇ ನವೀಕರಣ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಹಲವಾರು ಸದಸ್ಯರು ಬದಲಾವಣೆಯನ್ನು ಬಯಸುತ್ತಿದ್ದಾರೆಂದು ಮೂಲಗಳು ತಿಳಿಸಿದ್ದಾಗಿ ವರದಿ ಉಲ್ಲೇಖಿಸಿದೆ.
PublicNext
12/03/2022 09:55 pm