ಕೀವ್ : ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ತೀವ್ರಗೊಳ್ಳುತ್ತಿದ್ದು, ಇದೀಗ ಅಮೆರಿಕಾ ನೀಡಿರುವ ಸಹಾಯವನ್ನು ಉಕ್ರೇನ್ ಅಧ್ಯಕ್ಷ ಝೆಲೆನ್‍ಸ್ಕಿ ತಿರಸ್ಕರಿಸಿದ್ದಾರೆ.
ಸೆಂಟ್ರಲ್ ಕೀವ್‌ನಿಂದ ಸೆಲ್ಫಿ ವಿಡಿಯೊವೊಂದನ್ನು ಬಿಡುಗಡೆ ಮಾಡಿರುವ ಝೆಲೆನ್‍ಸ್ಕಿ, ನನಗೆ ಸ್ಥಳಾಂತರ ಬೇಡ. ಇಲ್ಲೇ ಇದ್ದು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಕೀವ್ ತೊರೆಯುವಂತೆ ಅಮೆರಿಕಾ ನೀಡಿದ್ದ ಸಲಹೆಯನ್ನು ಝೆಲೆನ್‍ಸ್ಕಿ ತಿರಸ್ಕರಿಸಿದ್ದಾರೆ. “ಇಲ್ಲಿ ಹೋರಾಟ ನಡೆಯುತ್ತಿದೆ. ನನಗೆ ಬೇಕಿರುವುದು ಮದ್ದುಗುಂಡುಗಳು, ಸವಾರಿಯಲ್ಲ” ಎಂದು ಝೆಲೆನ್‍ಸ್ಕಿ ಪ್ರತಿಕ್ರಿಯಿಸಿದ್ದಾರೆ ಎಂಬುದಾಗಿ ಹಿರಿಯ ಅಮೆರಿಕನ್ ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಝೆಲೆನ್‍ಸ್ಕಿ ಬಹು ಉತ್ಸುಕ ಹಾಗೂ ಲವಲವಿಕೆಯಿಂದ ಇದ್ದಾರೆ ಎಂದಿದ್ದಾರೆ.
ರಷ್ಯಾ ವಿರುದ್ಧ ನಿರ್ಣಯ ಕೈಗೊಳ್ಳುವ ಅಮೆರಿಕ ಹಾಗೂ ಇತರೆ ದೇಶಗಳ ಪ್ರಯತ್ನಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸೋಲಾಗಿದೆ. ಆದರೆ, ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧದ ಕರಡು ನಿರ್ಣಯಕ್ಕೆ ಅಭೂತಪೂರ್ವ ಬೆಂಬಲ ದೊರಕಿದೆ. ಇದು ಜಗತ್ತು ಉಕ್ರೇನ್ ಪರವಾಗಿ ಇದೆ ಎಂಬುದನ್ನು ತೋರಿಸಿದೆ ಎಂದು ಝೆಲೆನ್‍ಸ್ಕಿ ಹೇಳಿದ್ದಾರೆ.
PublicNext
27/02/2022 02:37 pm