ದಾವಣಗೆರೆ: ಶಿವಮೊಗ್ಗದಲ್ಲಿ ಭಾನುವಾರ ರಾತ್ರಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ಹಲವು ಗಣ್ಯ ವ್ಯಕ್ತಿಗಳು ಬೆಂಬಲವಾಗಿ ನಿಂತಿದ್ದಾರೆ. ಇದೀಗ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಹರ್ಷ ಕುಟುಂಬಕ್ಕೆ 2 ಲಕ್ಷ ರೂ.ಧನ ಸಹಾಯ ಘೋಷಿಸಿದ್ದಾರೆ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ರೇಣುಕಾಚಾರ್ಯ ಅವರು, "ಬಜರಂಗದಳ ಸಂಘಟನೆಯ ಯುವ ಕಾರ್ಯಕರ್ತ ಹರ್ಷ ಅವರನ್ನು ಕಳೆದುಕೊಂಡಿರುವುದು ನಮ್ಮ ಮನೆಯ ಮಗನನ್ನು ಕಳೆದುಕೊಂಡಷ್ಟೇ ದುಃಖವಾಗಿದೆ. ಹರ್ಷ ಅವರ ಕುಟುಂಬದ ಜೊತೆ ನಾನು ಸದಾ ಇರುತ್ತೇನೆ. ಈ ಸಂದರ್ಭದಲ್ಲಿ ಹರ್ಷ ಅವರ ಕುಟುಂಬಕ್ಕೆ ವೈಯಕ್ತಿಕವಾಗಿ 2 ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
ಹರ್ಷ ಅವರ ಕುಟುಂಬದ ಜೊತೆ ಸಮಸ್ತ ಹಿಂದೂ ಬಂಧುಗಳು ಇದ್ದೇವೆ. ಕೆಲವು ದುಷ್ಕರ್ಮಿಗಳು ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡಲು ಪ್ರಯತ್ನಿಸುತ್ತಿದ್ದು, ಹಿಂದೂ ಯುವಕರ ಪ್ರತಿ ರಕ್ತದ ಕಣಗಳನ್ನು ವ್ಯರ್ಥವಾಗಲು ಬಿಡುವುದಿಲ್ಲ. ಹಿಂದೂ ಯುವಕರ ರಕ್ಷಣೆಗೆ ನಮ್ಮ ಸರ್ಕಾರ ಸದಾ ಬದ್ಧವಾಗಿರುತ್ತದೆ ಎಂದು ಹೇಳಿದ್ದಾರೆ.
PublicNext
22/02/2022 09:50 am