ಬೆಂಗಳೂರು: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಭುಗಿಲೆದ್ದಿದೆ. ಈ ವಿವಾದ ಈಗ ಹೈಕೋರ್ಟ್ ಅಂಗಳಕ್ಕೂ ಕಾಲಿರಿಸಿದೆ. ವಿವಾದದ ಬಗ್ಗೆ ಶಾಸಕ ಪ್ರಿಯಾಂಕ್ ಖರ್ಗೆ ಸರಣಿ ಟ್ವೀಟ್ ಮಾಡಿದ್ದು ರಾಜ್ಯ ಸರಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಯುವಜನರಿಗೆ ಉದ್ಯೋಗಕ್ಕಾಗಿ ಕೌಶಲ್ಯ ತರಬೇತಿ ನೀಡಬೇಕಾದ ಸರ್ಕಾರ ಕೇಸರಿ ಶಲ್ಯದ ತರಬೇತಿ ನೀಡುತ್ತಿದೆ ಎಂದು ಅಸಮಾಧಾನಿತರಾಗಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರ ಟ್ವೀಟ್ ಈ ಕೆಳಗಿನಂತಿದೆ...
ರಾಜ್ಯದ ಯುವಜನತೆಗೆ
> 'ಜಾಬ್' ದೊರಕಿಸಿಕೊಡಬೇಕಾದ ಸರ್ಕಾರ, ಶಿಕ್ಷಣವನ್ನು ವಂಚಿಸುತ್ತಿದೆ.
> 'ಕೌಶಲ್ಯ ತರಬೇತಿ' ನೀಡಬೇಕಾದ ಸರ್ಕಾರ 'ಕೇಸರಿ ಶಲ್ಯ'ದ ತರಬೇತಿ ನೀಡುತ್ತಿದೆ.
> ಪುಸ್ತಕ ಕೊಡಬೇಕಾದ ಸರ್ಕಾರ ಕೈಯ್ಯಲ್ಲಿ ಕಲ್ಲು, ಕೋಲು ಕೊಟ್ಟು ಕಳಿಸುತ್ತಿದೆ.
> ವಿಧ್ಯಾದೀಕ್ಷೆ ಬದಲು ತ್ರಿಶೂಲ ದೀಕ್ಷೆಗೆ ಪ್ರೇರೇಪಿಸುತ್ತಿದೆ.
ಬಿಜೆಪಿ ಸರ್ಕಾರವೇ ಈ ವಿವಾದಕ್ಕೆ ಗಲಭೆಗೆ ಕಾರಣ, ಹಲವು ದಿನಗಳಿಂದ ವಿವಾದವಿದ್ದರೂ, ಬಗೆಹರಿಸಲು ಅವಕಾಶವಿದ್ದರೂ ಸರ್ಕಾರ ಬೆಳೆಯಲು ಬಿಟ್ಟಿದೆ. ರಾಜ್ಯಾದ್ಯಂತ ಗಲಭೆಯಾಗುತ್ತದೆ ಎಂದು ಇಂಟಲಿಜೆನ್ಸ್ & ಪೊಲೀಸರಿಗೆ ತಿಳಿದಿರಲಿಲ್ಲವೇ? ಶಾಲು ಹಂಚುವವರನ್ನು, ಪ್ರತಿಭಟನೆಯನ್ನು ಸಂಘಟಿಸುವವರನ್ನು ನಿಯಂತ್ರಿಸದೆ ಬಿಟ್ಟಿದ್ದೇಕೆ?
ಗೃಹಸಚಿವರೇ, ಸಮಾಜವಾದದ ನೆಲವಾದ ನಿಮ್ಮದೇ ಶಿವಮೊಗ್ಗ ಜಿಲ್ಲೆಯಲ್ಲಿ ರಾಜ್ಯವೇ ತಲೆತಗ್ಗಿಸುವ ಘಟನೆಗಳು ನಡೆದಿವೆ, ನಿಮ್ಮದೇ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಾಗದಿರುವುದು ನಿಮ್ಮ ಅಸಾಮರ್ಥ್ಯವೇ ಅಥವಾ ನಿಮ್ಮ ಕುಮ್ಮಕ್ಕು ಇದೆಯೇ? ನೀವು ಜಪಿಸುವ 'ಯುಪಿ ಮಾಡೆಲ್'ನ್ನು ಜಾರಿಗೊಳಿಸಿ ಕರ್ನಾಟಕವನ್ನು ಬೆಂಕಿಯಲ್ಲಿ ಬೇಯಿಸುವ ಇರಾದೆಯೇ?
ಹೀಗೆ ಸರಣಿ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ ರಾಜ್ಯ ಸರ್ಕಾರದ ಮೇಲೆ ಅಸಮಾಧಾನ ಹೊರ ಹಾಕಿದ್ದಾರೆ.
PublicNext
09/02/2022 05:40 pm