ಮೈಸೂರು: ಅಧಿಕಾರಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿದ್ದ ರಹೀಮಯ್ಯ ಎಂದು ಹೆಸರು ಬದಲಾಯಿಸಿಕೊಳ್ಳುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಹಿಜಾಬ್ ಸಂಘರ್ಷ ಕುರಿತಂತೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, 'ಎಲ್ಲರೂ ಕಾಲೇಜಿಗೆ 'ಜಾಬ್'ಗಾಗಿ ಬರುತ್ತಾರೆ. ಆದರೆ ನೀವು 'ಹಿಜಾಬ್'ಗಾಗಿ ಬರುತ್ತೀದ್ದೀರಾ? ಹಿಜಾಬ್ ಹಾಕಿಕೊಂಡು, ಟೋಪಿ ಹಾಕಿಕೊಂಡು ನೀವು ಕಲಿಯಬೇಕು ಎಂಬುದಾದರೆ ಮದರಸಗೆ ಹೋಗಿ. ಮದರಸದಲ್ಲಿ ನಿಮ್ಮ ಪ್ರತ್ಯೇಕ ಭಾವನೆ ಕಾಪಾಡಿಕೊಳ್ಳಬಹುದು. ಆದರೆ ಸರ್ಕಾರಿ ಶಾಲೆಗಳಲ್ಲಿ ಈ ಪ್ರತ್ಯೇಕತೆ ಸಾಧ್ಯವಿಲ್ಲ. ಇದು ಬ್ರಿಟಿಷರ ಭಾರತವಲ್ಲ, ಇದು ಭರತ ಖಂಡ ಎಂದು ಕಿಡಿಕಾರಿದರು.
ಇನ್ನು ಹಿಜಾಬ್ ವಿಚಾರವಾಗಿ ನಿನ್ನೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ ಕುಂದಾಪುರದಲ್ಲಿ ಒಬ್ಬ ಪ್ರಿನ್ಸಿಪಾಲ್ ಗೇಟ್ ಹಾಕಿ ಮುಸ್ಲಿಂ ಹೆಣ್ಣುಮಕ್ಕಳನ್ನು ತಡೆದಿದ್ದಾರೆ. ಅದೂ ಸರ್ಕಾರಿ ಕಾಲೇಜಿನ ಒಬ್ಬ ಪ್ರಿನ್ಸಿಪಾಲ್. ಸರ್ಕಾರಿ ಸಂಬಳ ತಗೊಂಡು, ಜನರ ಸಂಬಳ ತಗೊಂಡು ಈ ರೀತಿ ಮಾಡಬಹುದಾ? ಎಂದು ಪ್ರಶ್ನಿಸಿದ್ದರು. ಇದೆಲ್ಲಾ ಬಿಜೆಪಿಯ ಚುನಾವಣಾ ಕುತಂತ್ರ ಎಂದಿದ್ದರು. ಹಿಜಾಬ್ ಧರಿಸಿ ಬರುವವರನ್ನ ತಡೆಯುವುದು ಮೂಲಭೂತ ಹಕ್ಕಿನ ಉಲ್ಲಂಘನೆ. ವಿದ್ಯಾಭ್ಯಾಸ ಮಾಡಬಾರದು ಎಂಬ ಉದ್ದೇಶ ಇದರ ಹಿಂದಿದೆ ಎಂದು ವಾಗ್ದಾಳಿ ನಡೆಸಿದ್ದರು.ಸ
ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಕುರಿತು ಮೈಸೂರಿನ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿ, 'ಸಿದ್ದರಾಮಯ್ಯ ಅವರನ್ನು ಗಂಭೀರವಾಗಿ ಪರಿಗಣಿಸಬೇಡಿ. ಗೋರಿಪಾಳ್ಯದ ಜಮೀರ್ ಅಹ್ಮದ್ ಈಗ ಸಿದ್ದರಾಮಯ್ಯ ಅವರನ್ನು ಚಾಮರಾಜಪೇಟೆಯಿಂದ ಚುನಾವಣೆಗೆ ಸ್ಪರ್ಧಿಸಲು ಕರೆಯುತ್ತಿದ್ದಾರೆ. ಅದಕ್ಕಾಗಿ ಹೀಗೆ ಹೇಳಿರುವುದು' ಎಂದು ವ್ಯಂಗ್ಯವಾಡಿದ್ದಾರೆ.
PublicNext
05/02/2022 01:39 pm