ಬೆಂಗಳೂರು: ಮೈಸೂರಿನ ಗ್ಯಾಸ್ ಪೈಪ್ಲೈನ್ ಯೋಜನೆಗೆ ಸಂಬಂಧಿಸಿದಂತೆ ಸಂಸದ-ಶಾಸಕರ ನಡುವೆ ಬಿರುಸಿನ ತಿಕ್ಕಾಟ ನಡೆದಿದೆ. ಜನಪ್ರತಿನಿಧಿಗಳು ಈ ವಿಚಾರದಲ್ಲಿ ಬಹಿರಂಗವಾಗಿಯೇ ಪರಸ್ಪರ ಬೈದಾಡಿಕೊಳ್ತಿದ್ದಾರೆ. ಈ ಬಗ್ಗೆ ಖಡಕ್ ಎಚ್ಚರಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಧ್ಯಮಗಳ ಮುಂದೆ ಈ ರೀತಿ ಆರೋಪ-ಪ್ರತ್ಯಾರೋಪ ಮಾಡೋದನ್ನು ನಿಲ್ಲಿಸದಿದ್ದರೆ ಶಿಸ್ತುಕ್ರಮ ಜರುಗಿಸಲು ಪಕ್ಷದ ವರಿಷ್ಟರಿಗೆ ಶಿಫಾರಸು ಮಾಡಬೇಕಾಗುತ್ತೆ ಎಂದಿದ್ದಾರೆ.
ಭಾನುವಾರ ಮೈಸೂರಿನ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್ ಹಾಗೂ ಎಲ್.ನಾಗೇಂದ್ರ ಅವರಿಗೆ ದೂರವಾಣಿ ಮೂಲಕ ಪ್ರತ್ಯೇಕವಾಗಿ ಮಾತನಾಡಿದ ಕಟೀಲ್ ಅವರು, ಮುಂದಿನ ಚುನಾವಣೆಯಲ್ಲಿ ನಿಮಗೆ ಟಿಕೆಟ್ ಬೇಕಾಗಿದ್ದಲ್ಲಿ, ಚುನಾವಣೆ ಗೆಲ್ಲಬೇಕಿದ್ದಲ್ಲಿ ಈ ರೀತಿ ಮಾಧ್ಯಮಗಳ ಮೂಲಕ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಪಕ್ಷದ ಕಾರ್ಯಕರ್ತರಿಗೆ ಮಾದರಿಯಾಗಬೇಕಾದ ನೀವೇ ಈ ರೀತಿ ಮಾಧ್ಯಮಗಳ ಮೂಲಕ ವಾಗ್ವಾದ ನಡೆಸಿದರೆ ಹೇಗೆ? ಇಂಥ ನಡವಳಿಕೆಯನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ ಎಂದು ಏರಿದ ಧ್ವನಿಯಲ್ಲಿ ಹೇಳಿದರು ಎಂದು ತಿಳಿದು ಬಂದಿದೆ.
PublicNext
31/01/2022 07:54 am