ಬೆಳಗಾವಿ: ಲಕ್ಷ್ಮಣ ಸವದಿ ನೇತೃತ್ವದಲ್ಲಿ ನಡೆದಿದ್ದ ಜಿಲ್ಲಾ ಬಿಜೆಪಿ ನಾಯಕರ ರಹಸ್ಯ ಸಭೆಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆ ಹೊರಡಿಸಿರುವ ಅವರು, ಬೆಳಗಾವಿ ಜಿಲ್ಲೆಯ ಕೆಲವು ಬಿಜೆಪಿ ಮುಖಂಡರು ಸಭೆ ಸೇರಿರುವ ಕುರಿತು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಉದ್ಧೇಶ ಪೂರ್ವಕವಾಗಿ ಯಾರನ್ನೂ ಹೊರಗಿಟ್ಟು ಸಭೆಯನ್ನು ನಡೆಸುವ ಅವಶ್ಯಕತೆ ಇರಲಿಲ್ಲ. ಅಲ್ಲದೇ ಇದು ಬಿಜೆಪಿಯ ಅಧಿಕೃತ ಸಭೆಯೂ ಅಲ್ಲ. ಹೀಗಾಗಿ, ಈ ಸಭೆಗೆ ಹೆಚ್ಚಿನ ಮಹತ್ವ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಯಾರು? ಎಷ್ಟು? ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ ಎಂಬುದು ಪಕ್ಷದ ವರಿಷ್ಠರಿಗೆ ಚೆನ್ನಾಗಿ ಗೊತ್ತಿದೆ. ದಿನಕ್ಕೊಬ್ಬರಂತೆ ಸಭೆ ನಡೆಸುತ್ತಾ ಹೋದರೆ ಅದಕ್ಕೆಲ್ಲ ಉತ್ತರ ನೀಡುವ ಗೋಜಿಗೆ ಹೋಗುವುದಿಲ್ಲ. 2008ರಿಂದ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತಿದ್ದೇನೆ. ಜಿಲ್ಲೆಯಲ್ಲಿ ಪಕ್ಷವನ್ನು ಬೇರು ಮಟ್ಟದಿಂದ ಬಲವರ್ಧನೆಗೊಳಿಸಲು ಎಲ್ಲ ರೀತಿಯ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
PublicNext
24/01/2022 10:25 pm