ಬೆಂಗಳೂರು : ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ವಿಚಾರವಾಗಿ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪಾದಯಾತ್ರೆಗೆ ನಿರ್ಬಂಧ ಹೇರಿ ಆದೇಶ ನೀಡಿದೆ.
ಕೊರೊನಾ ನಿಯಮಗಳ ನಡುವೆಯೇ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಬ್ರೇಕ್ ಹಾಕಿ ರಾಜ್ಯ ಸರ್ಕಾರದ ಕಾರ್ಯದರ್ಶಿ ಸಿ.ಎಸ್ ರವಿಕುಮಾರ್ ಅವರು ಬುಧವಾರ ಸಂಜೆ ಆದೇಶ ಹೊರಡಿಸಿದ್ದಾರೆ.
ಈ ಕೂಡಲೇ ಪಾದಯಾತ್ರೆಯನ್ನು ನಿಲ್ಲಿಸುವಂತೆ ಕಾಂಗ್ರೆಸ್ ನಾಯಕರಿಗೆ ಸೂಚಿಸಲಾಗಿದೆ. ಪಾದಯಾತ್ರೆ ಕೈಗೊಳ್ಳುವುದು, ಉದ್ದೇಶಿತ ಮಾರ್ಗದಲ್ಲಿ ವಾಹನ ಸಂಚಾರ, ಜನ ಸಂಚಾರವನ್ನು ನಿಷೇಧಿಸಲಾಗಿದೆ. ಇನ್ನು ಸರ್ಕಾರದ ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿಲಾಗಿದೆ.
ಈ ಆದೇಶಕ್ಕೆ ತಲೆ ಕೆಡಿಸಿಕೊಳ್ಳದ ಕಾಂಗ್ರೆಸ್ ನಾಯಕರು ಗುರುವಾರ ಬೆಳಗ್ಗೆಯಿಂದ ಪಾದಯಾತ್ರೆ ಮುಂದುವರಿಸಲು ನಿರ್ಧರಿಸಿದೆ. ಎಲ್ಲರೂ ಒಂದಾಗಿ ಸೇರಲು ಡಿಕೆ ಶಿವಕುಮಾರ್ ಕಾಂಗ್ರೆಸ್ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಗುರುವಾರ ಏನಾಗಲಿದೆ ಎನ್ನುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಹಿರಿಯ ನಾಯಕರು ಪಾದಯಾತ್ರೆ ಮುಂದುವರಿಯಲು ತಿಳಿಸಿದ್ದಾರೆ. ಬೇಕಾದರೆ ನಮ್ಮನ್ನು ಬಂಧನ ಮಾಡಲಿ ಎಂದು ಸಂಸದ ಡಿಕೆ ಸುರೇಶ್ ಸರ್ಕಾರದ ಆದೇಶಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ರಾಮನಗರದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
PublicNext
12/01/2022 10:59 pm