ದಾವಣಗೆರೆ: ಕೊರೊನಾದಿಂದ ಸಾವನ್ನಪ್ಪಿದವರ ಕುಟುಂಬದವರಿಗೆ ಹಣ ಕೊಟ್ಟು ಆಣೆ ಪ್ರಮಾಣ ಮಾಡಿಸಿದ ರೇಣುಕಾಚಾರ್ಯ ವಿರುದ್ಧ ಮಾಜಿ ಶಾಸಕ ಶಾಂತನಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊನ್ನಾಳಿ ತಾಲೂಕಿನಲ್ಲಿ ಕೊರೊನಾ ಹಾವಳಿಯಿಂದ ಸತ್ತಂತವರ ಕುಟುಂಬದವರಿಗೆ ಸರ್ಕಾರದಿಂದ ಬಂದ 1 ಲಕ್ಷ ರೂಪಾಯಿ ಹಣ ಬಂದಿದೆ. ಅವರಿಗೆಲ್ಲರಿಗೂ ದೇವರ ಫೋಟೋ ಇಟ್ಟು ಮುಂದಿನ ಚುನಾವಣೆಯಲ್ಲಿ ತನಗೆ ಮತ ಹಾಕುವಂತೆ ಹತ್ತು ಸಾವಿರ ರೂಪಾಯಿ ಕೊಟ್ಟಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದ್ದಾರೆ.
ಕಳೆದ ಆರು ತಿಂಗಳಿನಿಂದಲೂ ನಾನು ಸಹ ಕೊರೊನಾದಿಂದ ಮೃತಪಟ್ಟವರ ಮನೆಗೆ ಹೋಗಿ ಹಾರ ಹಾಕಿ ಸಂತಾಪ ಸೂಚಿಸುವ ಕೆಲಸ ಮಾಡಿದ್ದೇನೆ. ಸಾಂತ್ವನ ಹೇಳಿ ಬಂದಿದ್ದೇನೆ. ಈ ಬಗ್ಗೆ ಶಾಸಕ ರೇಣುಕಾಚಾರ್ಯ ಟೀಕೆ ಮಾಡಿದ್ದಾರೆ. ಹಾರಕ್ಕೆ ಬೆಲೆ ಕಟ್ಟಲು ಆಗದು. ಕೋಟಿ ಕೋಟಿ ರೂಪಾಯಿ ಅಂತಾ ಹಾರಕ್ಕೆ ಬೆಲೆ ಕಟ್ಟಲಾಗದು. ಮೃತರ ಫೋಟೋಗಳಿಗೆ ಹಾರ ಹಾಕಿ ಸಾಂತ್ವನ ಹೇಳಿ ಕುಟುಂಬದವರ ಕಣ್ಣೀರು ಒರೆಸುವ ಕೆಲಸ ಮಾಡಿದ್ದೇನೆ. ಹತ್ತು ಸಾವಿರ ರೂಪಾಯಿ ಕೊಟ್ಟಿದ್ದೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ನೋವಿಗೆ ಸ್ಪಂದಿಸಿ ಹಣ ಕೊಟ್ಟಿದ್ದರೆ ಖುಷಿ ಪಡುತ್ತೇನೆ, ಅಭಿನಂದಿಸುತ್ತೇನೆ. ಆದ್ರೆ, ಪ್ರಮಾಣ ಮಾಡಿಸಿಕೊಂಡು ಹಣ ಕೊಟ್ಟಿರುವುದು ಮತದಾರರಿಗೆ ಮೋಸ ಮಾಡಿದ ಹಾಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಪದಲ್ಲಿ ಹುರುಳಿಲ್ಲ:
2023 ಕ್ಕೆ ನನಗೆ ಆಶೀರ್ವಾದ ಮಾಡಿ ಎಂದು ಕೇಳಿದ್ದು ಸತ್ಯ. ಮನೆ ಬಳಿ ಬಂದವರಿಗೆ ಒಂದೂವರೆ ಸಾವಿರ ಜನರಿಗೆ ಊಟ ನೀಡಿದ್ದೇನೆ. ಸಾರ್ವಜನಿಕ ಸಭೆ ಹಾಗೂ ಮನೆಗೆ ಬಂದವರಿಗೆ ಮತ ನೀಡುವಂತೆ ಕೇಳಿಕೊಂಡಿದ್ದೇನೆ. ಅವಳಿ ತಾಲೂಕಿನಲ್ಲಿ ಮೂರು ನೂರು ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ನನ್ನ ಕೈಯಲ್ಲಾದಷ್ಟು ಸಹಾಯ ಮಾಡಿದ್ದೇನೆ. ಕೆಲಸ ಮಾಡುವವರಿಗೆ ಮತ ನೀಡಿ ಎಂದು ಕೇಳಿದ್ದು ನಿಜ. ಮನೆಗೆ ಬಂದವರಿಗೆ ವೋಟ್ ಕೇಳಿದ್ದೇನೆ. ಅಧಿಕಾರದಲ್ಲಿದ್ದಾಗ ಅಂಗನವಾಡಿ ಕೇಂದ್ರದವರಿಗೆ ಮತ ಹಾಕಿ ಎಂದು ಮಾಜಿ ಶಾಸಕರು ಕೇಳಿರಲಿಲ್ವಾ? ನಾನು ಮಾಡಿದ ಕೆಲಸಗಳನ್ನು ಗುರುತಿಸಿ ವೋಟ್ ಕೇಳಿದ್ದೇನೆ. ಮಾಜಿ ಶಾಸಕರು ಹತಾಶ ಮನೋಭಾವದಿಂದ ಕೀಳಮಟ್ಟದ ಅಪಪ್ರಚಾರ ಮಾಡಿದ್ದಾರೆ. ಬೋರ್ ವೆಲ್ ನಲ್ಲಿ 30 ಸಾವಿರ ರೂಪಾಯಿ ದುಡ್ಡು ಹೊಡೆದಿದ್ದೇನೆ, ಕೋವಿಡ್ ವೇಳೆಯಲ್ಲಿ ಕೋಟಿಗಟ್ಟಲೇ ಹಣ ಮಾಡಿದ್ದೇನೆ ಎಂಬ ಆರೋಪ ಮಾಡಿದ್ದಾರೆ. ದಾಖಲಾತಿ ಇದ್ದರೆ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.
PublicNext
02/01/2022 03:47 pm